(ನ್ಯೂಸ್ ಕಡಬ) newskadaba.com, ಜು.16 ಅಮೆರಿಕವು ತನ್ನ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇರಾನ್, ಯುಎಸ್ ಸೈನಿಕರೊಂದಿಗಿನ ತಿಳಿವಳಿಕೆ ಒಪ್ಪಂದದಿಂದ ತಾನು ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಬುಧವಾರ ಮುಂಜಾನೆ ಅಮೆರಿಕ ಪಡೆಗಳು ಇರಾನಿನ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸಿದ ಬೆನ್ನಲ್ಲೇ, ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.ಎಷ್ಟೇ ಭಾರಿ ಬೆಲೆ ತೆರಬೇಕಾಗಿ ಬಂದರೂ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಸಂಪೂರ್ಣ ನಿಯಂತ್ರಣವನ್ನು ಸಾಧಿಸಲಿದೆ ಎಂದು ಇರಾನ್ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನೆರೆಯ ಒಮಾನ್ ದೇಶಕ್ಕೆ ಸೇರಿದ ಅರ್ಧದಷ್ಟು ಜಲಮಾರ್ಗವೂ ಇನ್ಮುಂದೆ ಇರಾನ್ ಸೇನೆಯ ನಿಯಂತ್ರಣದಲ್ಲೇ ಇರಲಿದೆ ಎಂದು ಅವರು ಘೋಷಿಸಿದ್ದಾರೆ.ಇರಾನ್ ತನ್ನ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಮತ್ತು ಅಮೆರಿಕದ ಮುಂದೆ ಮಂಡಿಯೂರಿ ಮಾತುಕತೆಗೆ ಭಿಕ್ಷೆ ಬೇಡುವುದಿಲ್ಲ ಎಂದು ಕಜೆಮ್ ಘರಿಬಬಾದಿ ಸ್ಪಷ್ಟಪಡಿಸಿದ್ದಾರೆ.









