
(ನ್ಯೂಸ್ ಕಡಬ) newskadaba.com, ನ .09 . ಹೊಸ ವರ್ಷದಿಂದ ಹೊಸ ಸೆಕ್ಯೂರಿಟಿ ಫೀಚರ್ಸ್ ಇರುವ ಹೊಸ ‘ಚೆಕ್ ಟ್ರಂಕೇಶನ್ ಸಿಸ್ಟಮ್’ (ಸಿಟಿಎಸ್) ಚೆಕ್ ಬುಕ್ಗಳು ಕಡ್ಡಾಯವಾಗಿ ಬರಲಿವೆ ಎಂಬ ವದಂತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಳ್ಳಿಹಾಕಿದೆ.
ಇಂಥ ಯಾವುದೇ ಪ್ರಸ್ತಾಪ ಆರ್ಬಿಐ ಬಳಿ ಇಲ್ಲ. ಇದು ಸದ್ಯಕ್ಕೆ ದೂರವಾದ ಮತ್ತು ದಾರಿ ತಪ್ಪಿಸುವ ಸುಳ್ಳು ವರದಿ. ಪ್ರಸ್ತುತ ಚಾಲ್ತಿಯಲ್ಲಿರುವ ಚೆಕ್ ಬುಕ್ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಡಿಸೆಂಬರ್ 31, 2026 ರ ನಂತರ ಹಳೆಯ ಚೆಕ್ ಬುಕ್ಗಳು ಅಮಾನ್ಯವಾಗುತ್ತವೆ ಎಂಬ ವಾದಗಳು ಸಂಪೂರ್ಣವಾಗಿ ತಪ್ಪು ಎಂದು ಸ್ಪಷ್ಟಪಡಿಸಿದೆ.
ಬ್ಯಾಂಕಿಂಗ್ ನಿಯಮಗಳು ಮತ್ತು ಚೆಕ್ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು. ಕೇವಲ ಆರ್ಬಿಐನ ಅಧಿಕೃತ ಪ್ರಕಟಣೆಗಳು ಮತ್ತು ವೆಬ್ಸೈಟ್ ಮೂಲಕ ಬರುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಆರ್ಬಿಐ ಸೂಚಿಸಿದೆ.
ಸುಳ್ಳು ಸುದ್ದಿಯಲ್ಲಿನ ಹೊಸ ನಿಯಮಗಳು:2027ರ ಜನವರಿ 1ರಿಂದ ಹೊಸ ಚೆಕ್ ಸಿಸ್ಟಂ ಜಾರಿಗೆ ಬರುತ್ತದೆ. ಹಳೆಯ ಚೆಕ್ಗೆ 50,000 ರೂ ಮಿತಿ ಇರುತ್ತದೆ. ಹೊಸ ಚೆಕ್ನಲ್ಲಿ ಅಕ್ಷರ ಅಂಕಿ ಸಂಯೋಜನೆಯ ಸಂಖ್ಯೆ, ಹೊಸ ಎಂಐಸಿಆರ್ ಕೋಡ್ ಇರುತ್ತದೆ. ಕೋಡ್ವೊಂದನ್ನು ಮರೆಮಾಚಲಾಗಿರುತ್ತದೆ. ಅದು ಯುವಿ ಮೂಲಕವಷ್ಟೇ ಕಾಣುಬಲ್ಲುದು. ಪ್ರತೀ ಚೆಕ್ ಹಾಳೆಯೂ ಆರ್ಬಿಐ ಸಿಸ್ಟಂ ಜೊತೆ ನೇರವಾಗಿ ಲಿಂಕ್ ಆಗಿರುತ್ತದೆ.




