
(ನ್ಯೂಸ್ ಕಡಬ) newskadaba.com, ನ . 09 .ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರ್ಕಾರವು ಈಗ ಶೇ.20-30ರಷ್ಟನ್ನೂ ಸ್ವೀಕರಿಸುತ್ತಿಲ್ಲ. ಇದರ ಹಿಂದೆ ಅವ್ಯವಹಾರ ನಡೆದಿದೆ ಎನ್ನುವ ರಾಹುಲ್ ಗಾಂಧಿ ಮತ್ತು ಸಚಿವ ರಿಜ್ವಾನ್ ಅರ್ಷದ್ ಆರೋಪದಲ್ಲಿ ಸತ್ಯಾಂಶವಿದೆ. ಎಥೆನಾಲ್ಗೆ ಸಂಬಂಧಿಸಿದಂತೆ ಈಗಿನ ಸಮಸ್ಯೆಗೆ ಕೇಂದ್ರ ಸರ್ಕಾರದ ಎಡವಟ್ಟುಗಳೇ ಕಾರಣ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಗಬ್ಬೆಬ್ಬಿಸಿದೆ. ಅವರು ಮನಸ್ಸಿಗೆ ಬಂದಂತೆ ಇ-10, ಇ-20, ಇ-30 ಎಂದೆಲ್ಲ ಹೇಳುತ್ತಿದ್ದಾರೆ. ಮೊದಲು ಉತ್ಪಾದನೆ ಮಾಡುವಂತೆ ಹೇಳಿದ ಮೇಲೆ ಅದನ್ನು ಖರೀದಿಸಬೇಕು. ಆದರೆ, ಕೇಂದ್ರ ಸರ್ಕಾರವು ಶೇ.20-30 ರಷ್ಟು ಉತ್ಪಾದಿತ ಎಥೆನಾಲನ್ನೂ ಖರೀದಿಸುತ್ತಿಲ್ಲ. ಸಹಜವಾಗಿಯೇ ಕೈಗಾರಿಕೆಯವರು ಏನು ಮಾಡಬೇಕೆನ್ನುವ ಪ್ರಶ್ನೆ ಬರುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ನಿಗದಿಗಿಂತ ಹೆಚ್ಚು ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿಯವರು ಆಗ್ರಹಿಸಿರುವುದು ನ್ಯಾಯಯುತವಾಗಿದೆ. ಅವರು ಆರೋಪವನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಹಾಗೆ ನೋಡಿದರೆ, ಕೇಂದ್ರ ಸರ್ಕಾರ ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಂಡಿಲ್ಲ. ರಾಜ್ಯ ಸರ್ಕಾರ ಕೂಡ ಇದರ ಬಗ್ಗೆ ಕ್ರಮ ವಹಿಸಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಇದರ ಬಗ್ಗೆ ತೀರ್ಮಾನಿಸುತ್ತಾರೆ” ಎಂದರು.




