ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಮಂಗಳೂರಿನಲ್ಲಿ ಒಎನ್ಜಿಸಿಯಿಂದ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ



(ನ್ಯೂಸ್ ಕಡಬ) newskadaba.com ಜು. 12. ಇರಾನ್ಅಮೆರಿಕ ಸಂಘರ್ಷ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತ ತನ್ನ ಇಂಧನ ಭದ್ರತೆಯನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಮಂಗಳೂರಿನಲ್ಲಿ 1.75 ದಶಲಕ್ಷ ಮೆಟ್ರಿಕ್ ಟನ್ (MMT) ಸಾಮರ್ಥ್ಯದ ನೂತನ ತುರ್ತು ತೈಲ ಸಂಗ್ರಹಾಗಾರ (SPR) ಸ್ಥಾಪಿಸಲು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ಸಂಸ್ಥೆಗೆ ತಾತ್ವಿಕ ಅನುಮೋದನೆ ದೊರೆತಿದೆ.







ಭಾರತದಲ್ಲಿ ಇದುವರೆಗೆ ಇಂತಹ ತೈಲ ಸಂಗ್ರಹಾಗಾರಗಳನ್ನು ಸರ್ಕಾರದ ಸ್ವಾಮ್ಯದಐಎಸ್ಪಿಆರ್ಎಲ್‘ (ISPRL) ಸಂಸ್ಥೆ ನಿರ್ಮಿಸುತ್ತಿತ್ತು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಎನ್ಜಿಸಿ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಇಷ್ಟು ಬೃಹತ್ ಸಂಗ್ರಹಾಗಾರವನ್ನು ನಿರ್ಮಿಸುತ್ತಿದೆ.






ಹೊಸದಾಗಿ ನಿರ್ಮಾಣವಾಗಲಿರುವ ಸಂಗ್ರಹಾಗಾರವು ಸುಮಾರು 1.28 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸುವ ಸಾಮರ್ಥ್ಯ ಹೊಂದಿರಲಿದ್ದು, ಹರ್ಮುಜ್ ಜಲಸಂಧಿಯಲ್ಲಿ ಉಂಟಾಗುವ ಇಂಧನ ಪೂರೈಕೆಯ ವ್ಯತ್ಯಯವನ್ನು ತಡೆಯಲು ನೆರವಾಗಲಿದೆ. ಜೊತೆಗೆ ಎಲ್ಪಿಜಿ ಉತ್ಪಾದನೆ ಮತ್ತು ಬೇಡಿಕೆಯ ಸಮತೋಲನಕ್ಕೂ ಇದು ಸಹಕಾರಿಯಾಗಲಿದೆ.

ಮಂಗಳೂರಿನಲ್ಲಿ ಈಗಾಗಲೇ ದಿನಕ್ಕೆ 3 ಲಕ್ಷ ಬ್ಯಾರೆಲ್ ತೈಲ ಶುದ್ಧೀಕರಿಸುವ ಬೃಹತ್ ರಿಫೈನರಿಯನ್ನು ಎಂಆರ್ಪಿಎಲ್ (MRPL) ಹೊಂದಿದ್ದು, ಹೊಸ ಸಂಗ್ರಹಾಗಾರವು ಇದರೊಂದಿಗೆ ಸಂಯೋಜನೆಗೊಳ್ಳಲಿದೆ. ತೈಲ ಸಂಗ್ರಹಾಗಾರದ ವಾಣಿಜ್ಯ ಬಳಕೆಗೆ ಮುಕ್ತಾವಕಾಶ ನೀಡುವಂತೆ ಒಎನ್ಜಿಸಿ ಸರ್ಕಾರಕ್ಕೆ ಕೋರಿದೆ.

ಪ್ರಸ್ತುತ ದೇಶದ ಮಂಗಳೂರು, ಪಾದೂರು (ಉಡುಪಿ) ಮತ್ತು ವಿಶಾಖಪಟ್ಟಣಂನಲ್ಲಿ ಒಟ್ಟು 5.33 MMT ಸಾಮರ್ಥ್ಯದ ಭೂಗತ ತೈಲ ಸಂಗ್ರಹಾಗಾರಗಳಿದ್ದು, ಹೊಸ ಯೋಜನೆಯಿಂದ ದೇಶದ ತುರ್ತು ತೈಲ ಬ್ಯಾಕಪ್ ಮತ್ತಷ್ಟು ಬಲಗೊಳ್ಳಲಿದೆ.

error: Content is protected !!
Scroll to Top