(ನ್ಯೂಸ್ ಕಡಬ) newskadaba.com ಜು. 12. ಬೆಂಗಳೂರಿನ ಬಿಎಂಟಿಸಿ ಬಸ್ ಸೇವೆಗಳಲ್ಲಿನ ಲೋಪದೋಷಗಳನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ವೇಷ ಮರೆಸಿಕೊಂಡು ಪ್ರಯಾಣಿಸಿ, ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ವರದಿಯ ಪ್ರಕಾರ, ಶನಿವಾರದಂದು ಸಂಜೆ 7 ರಿಂದ 9.10ರ ನಡುವೆ, ಸಚಿವರು ಮಾಸ್ಕ್ ಧರಿಸಿ ಗುರುತು ಸಿಗದಂತೆ ಜಯಮಹಲ್ ಮತ್ತು ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್‍ಗಳಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ವರ್ತಿಸುತ್ತಿರುವ ನಿರ್ಲಕ್ಷ್ಯದ ಧೋರಣೆಯನ್ನು ಸಚಿವರು ಸ್ವತಃ ಗಮನಿಸಿದ್ದಾರೆ. ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ, ಚಿಲ್ಲರೆ ಸಮಸ್ಯೆ ಉಂಟಾದಾಗ ನಿರ್ವಾಹಕನು ಸಚಿವರನ್ನೇ ಬಸ್‌ನಿಂದ ಕೆಳಗಿಳಿಯುವಂತೆ ತಾಕೀತು ಮಾಡಿದ ಪ್ರಸಂಗ ನಡೆದಿದೆ.
ಈ ವೇಳೆ ನಿರ್ವಾಹಕ ಸಾರ್ವಜನಿಕರಿಗೆ ಚಿಲ್ಲರೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದು, ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದಿರುವುದು ಹಾಗೂ ಅಜಾಗರೂಕ ಚಾಲನೆಯಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ತಪ್ಪಿತಸ್ಥ ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ದಿಢೀರ್ ಪರಿಶೀಲನೆಯ ಮೂಲಕ ಸಚಿವರು ಬಿಎಂಟಿಸಿ ಸೇವೆಯಲ್ಲಿ ಪಾರದರ್ಶಕತೆ ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.













