(ನ್ಯೂಸ್ ಕಡಬ) newskadaba.com ಜು. 12. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ (BMTC) ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಇ–ಡ್ರೈವ್’ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ ಗಳು ಹಾಗೂ ರೂ. 1,505 ಕೋಟಿ ಸಹಾಯಧನ ಮಂಜೂರಾಗಿದ್ದರೂ, ರಾಜ್ಯ ಸಚಿವ ಸಂಪುಟದಿಂದ ಇನ್ನೂ ಅನುಮೋದನೆ ಸಿಗದಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ಕುರಿತು ಜೆಡಿಎಸ್ ತನ್ನ ಅಧಿಕೃತ ‘ಎಕ್ಸ್‘ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಜೆಡಿಎಸ್ ಆರೋಪಗಳು:
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದಿಂದ ಬೆಂಗಳೂರಿಗೆ ಈ ಯೋಜನೆ ಮಂಜೂರಾಗಿದ್ದು, 2025ರಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ರಾಜ್ಯ ಸರ್ಕಾರ ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡುತ್ತಿದೆ. ಸಾರ್ವಜನಿಕ ಹಿತಕ್ಕಿಂತ ಸ್ವ-ಹಿತಾಸಕ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಹೈದರಾಬಾದ್, ಸೂರತ್ ಹಾಗೂ ಅಹಮದಾಬಾದ್ ನಗರಗಳು ಈಗಾಗಲೇ ಯೋಜನೆ ಜಾರಿಯಲ್ಲಿ ಮುನ್ನಡೆ ಸಾಧಿಸಿದ್ದರೆ, ಕರ್ನಾಟಕ ಮಾತ್ರ ಹಿಂದೆ ಬಿದ್ದಿದೆ.
ಬೆಂಗಳೂರು ಜನರಿಗೆ ಹೊಸ ಬಸ್ ಗಳು ಬೇಡವೇ? ಕೇಂದ್ರ ನೀಡಿರುವ ಸಹಾಯಧನವನ್ನೂ ಬಳಸಿಕೊಳ್ಳದಿರುವುದು ಆಡಳಿತ ವೈಫಲ್ಯವಲ್ಲವೇ?” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ಪ್ರಶ್ನಿಸಿದ್ದು, ಯೋಜನೆ ಕೈತಪ್ಪಿದರೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದೆ.
ಇದಕ್ಕೂ ಮುನ್ನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಯೋಜನೆಯ ಷರತ್ತುಗಳಿಂದ ರಾಜ್ಯ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಕೇಂದ್ರ ನೀಡುವ ಸಬ್ಸಿಡಿ ಸಂಪೂರ್ಣ ವೆಚ್ಚವನ್ನು ಭರಿಸುವುದಿಲ್ಲ ಎಂಬ ಕಾರಣಕ್ಕೆ ಯೋಜನೆಯನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದರು. ಸದ್ಯ ಈ ಯೋಜನೆಗೆ ಅನುಮೋದನೆ ಸಿಗದೇ ಬಾಕಿ ಉಳಿದಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.













