(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 12. ಡಿವೈನ್ ಪಾರ್ಕ್ ಟ್ರಸ್ಟ್ (ರಿ.), ಸಾಲಿಗ್ರಾಮ, ಉಡುಪಿ ಜಿಲ್ಲೆಯ ಅಂಗಸಂಸ್ಥೆಯಾದ ವಿವೇಕ ಜಾಗೃತ ಬಳಗ, ಕಡಬ–ಬಿಳಿನೆಲೆ ಇವರ ವತಿಯಿಂದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ & quot; ವಿದ್ಯಾರ್ಥಿ ದೀಪ & quot; ಕಾರ್ಯಕ್ರಮವು ಕೇವಳದ ಯಾದವ ಶ್ರೀ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ವಹಿಸಿ, ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ನಮ್ಮ ಸಾಧನೆ ಸಮಾಜಮುಖಿಯಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಅಧ್ಯಕ್ಷೀಯ ಸಂದೇಶ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳ ರಾಜ್ಯಮಟ್ಟದ ತರಬೇತುದಾರ, ಪತ್ರಕರ್ತ, ಅಂಕಣಕಾರ ಹಾಗೂ ಡಿವೈನ್ ಪಾರ್ಕ್ನ ಆರ್ತ ಸೇವಕರಾದ ಶ್ರೀ ಕೆ. ಪ್ರಕಾಶ್ ಕುಮಾರ್ ಶೆಟ್ಟಿ ಭಾಗವಹಿಸಿ, ವಿವಿಧ ಪ್ರೇರಣಾದಾಯಕ ಕಥೆಗಳ ಮೂಲಕ ಜೀವನ ಮೌಲ್ಯಗಳು, ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಾಸದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆದು ಯಶಸ್ಸನ್ನು ಸಾಧಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್. ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ಡಿವೈನ್ ಪಾರ್ಕ್, ಸಾಲಿಗ್ರಾಮದ ಚತುರ ಸೇವಕರಾದ ಶ್ರೀ ಸುಂದರ ಗೌಡ ಏನೆಕಲ್, ವಿವೇಕ ಜಾಗೃತ ಬಳಗ ಕಡಬ–ಬಿಳಿನೆಲೆಯ ಅಧ್ಯಕ್ಷರಾದ ಶ್ರೀಮತಿ ತೀರ್ಥ ಕುಮಾರಿ ಹಾಗೂ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕ ಜಾಗೃತ ಬಳಗ ಕಡಬದ ಖಜಾಂಜಿಯಾದ ಶ್ರೀಮತಿ ಕವಿತಾ ಪಣೆಮಜಲು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
9ನೇ ತರಗತಿಯ ಲಿಖಿತ್ ಕುಂಬಾರ ಸ್ವಾಗತಿಸಿ 10ನೇ ತರಗತಿಯ ಹರಿಪ್ರಿಯಾ ಹರಿದಾಸ್ ಪ್ರಾರ್ಥಿಸಿದರು. ಕಡಬ ವಿವೇಕ ಜಾಗೃತ ಬಳಗದ ಹಿತೈಷಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ವೀರಮ್ಮ ವಂದಿಸಿದರು. 9ನೇ ತರಗತಿಯ ಎನ್. ಕೆ. ಯಶ್ವಿತ್ ಕಾರ್ಯಕ್ರಮವನ್ನು ನಿರೂಪಿಸಿದರು.









