ಚಿನ್ನದಂಗಡಿಯಲ್ಲಿ ವಾಟರ್ ಬಾಟಲಿ ಬದಲು ಆಸಿಡ್ ನೀಡಿದ ಸಹಾಯಕ- ಶಿಕ್ಷಕಿ ಗಂಭೀರ!!



(ನ್ಯೂಸ್ ಕಡಬ) newskadaba.com ಜು. 12. ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದೆ.







ಶಿಕ್ಷಕಿಯೊಬ್ಬರು ತಮ್ಮ ತಾಯಿಯೊಂದಿಗೆ ಅರ್ಜುನ್ ನಗರದ ಆಭರಣ ಅಂಗಡಿಯೊಂದಕ್ಕೆ ಚಿನ್ನ ಖರೀದಿಸಲು ಬಂದಿದ್ದ ವೇಳೆ ಅವರು ಕುಡಿಯಲು ನೀರು ಕೇಳಿದಾಗ, ಅಂಗಡಿಯ ಮಾಲೀಕರು ಪಕ್ಕದ ಬೇಕರಿಯಿಂದ ನೀರಿನ ಬಾಟಲಿ ತರುವಂತೆ ತಮ್ಮ ಸಹಾಯಕನಿಗೆ ಸೂಚಿಸಿದ್ದಾರೆ. ಸಹಾಯಕ ತಂದುಕೊಟ್ಟ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಶಿಕ್ಷಕಿಗೆ ಗಂಟಲಿನಲ್ಲಿ ತೀವ್ರ ಉರಿ ಕಾಣಿಸಿಕೊಂಡು ಅವರು ಗಾಬರಿಯಿಂದ ಹೊರಗೆ ಓಡಿದ್ದಾರೆ.






ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಶಿಕ್ಷಕಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಶಿಕ್ಷಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಆಭರಣಗಳನ್ನು ಸ್ವಚ್ಛಗೊಳಿಸಲು ಅಂಗಡಿಗಳಲ್ಲಿ ಆಸಿಡ್ ಬಳಸುವುದರಿಂದ, ನೀರಿನ ಬಾಟಲಿ ಮತ್ತು ಆಸಿಡ್ ಬಾಟಲಿ ಅದಲು ಬದಲಾಗಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

error: Content is protected !!
Scroll to Top