(ನ್ಯೂಸ್ ಕಡಬ) newskadaba.com ಜು. 07. ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮಂಗಳವಾರ ಭಾರೀ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮ ಮೇಪ್ಪಾಡಿಯಲ್ಲಿರುವ ನಿರ್ಮಾಣ ಹಂತದ ಸುರಂಗ ರಸ್ತೆ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ನಿರಂತರ ಮಳೆಯ ಪರಿಣಾಮ ಮೀನಾಕ್ಷಿ ಸೇತುವೆ ಸಮೀಪದ ಬೆಟ್ಟ ಕುಸಿದಿದ್ದು, ನಿರ್ಮಾಣ ಹಂತದ ಸುರಂಗ ರಸ್ತೆ ಯೋಜನೆ ನಡೆಯುತ್ತಿದ್ದ ಸ್ಥಳದಲ್ಲಿ ಅವಘಡ ಸಂಭವಿಸಿದೆ.
ಭೂಕುಸಿತದ ಹೊಡೆತಕ್ಕೆ ರಸ್ತೆ ಮತ್ತು ಸಮೀಪದ ಹೊಳೆ ಮಣ್ಣಿನಿಂದ ಮುಚ್ಚಿಹೋಗಿದೆ. ಈ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ವಾಹನ ಸವಾರರು ಮತ್ತು ಪಾದಚಾರಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಕಳೆದ 24 ಗಂಟೆಗಳಿಂದ ವಯನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಭೀತಿಯನ್ನು ಹೆಚ್ಚಿಸಿದೆ.










