(ನ್ಯೂಸ್ ಕಡಬ) newsksdaba.com ಜೂ. 19. ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಮೃತಪಟ್ಟ ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರದಂದು ಬೆಳಗ್ಗೆ ಮುಂಬೈನಲ್ಲಿರುವ ಅವರ ಮನೆಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಹ-ಪೈಲಟ್ ಮೃತದೇಹವನ್ನು ಹೊತ್ತ ಶವಪೆಟ್ಟಿಗೆಯನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿಸಿ, ಗೋರೆಗಾಂವ್ (ಪಶ್ಚಿಮ)ನ ರಾಮ ಮಂದಿರ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು.
ಕ್ಲೈವ್ ಕುಂದರ್ ತಮ್ಮ ವೃದ್ಧ ಪೋಷಕರು ಮತ್ತು ತಂಗಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು, ಪಾರ್ಥಿವ ಶರೀರವನ್ನು ಕ್ಲೈವ್ ಕುಂದರ್ ಅವರ ಮನೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಕಳೆದ ವಾರ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು, 12 ಸಿಬ್ಬಂದಿ ಸೇರಿದಂತೆ 242 ಜನರಲ್ಲಿ 241 ಜನರು ಮೃತಪಟ್ಟಿದ್ದರು.










