ಶಾಲಾ ವಾಹನಗಳ ಮೇಲೆ ವಿಶೇಷ ತಪಾಸಣಾ ಡ್ರೈವ್ 1.58 ಲಕ್ಷ ರೂ. ದಂಡ ವಸೂಲು



(ನ್ಯೂಸ್ ಕಡಬ) newskadaba.com ಜೂ. 19. ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ, ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಶಾಲಾ ವಾಹನಗಳ ಮೇಲೆ ನಿಗಾ ಇಡಲು ಉಡುಪಿ ಎಸ್ಪಿ ಆಯಾ ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದರಿಂದ ಉಡುಪಿ ಜಿಲ್ಲಾ ಪೊಲೀಸರು ಗುರುವಾರದಂದು ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ಶಾಲೆಗಳ ಮುಂದೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.







ಈ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 930 ವಾಹನಗಳನ್ನು ತಪಾಸಣೆ ನಡೆಸಲಾಗಿ, ಒಟ್ಟು 282 ಪ್ರಕರಣಗಳನ್ನು ದಾಖಲಿಸಿ ರೂ. 1,58,000/- ದಂಡ ವಿದಿಸಲಾಗಿದೆ. ಇದರಲ್ಲಿ ಪಾನಮತ್ತ ಚಾಲನೆ ಬಗ್ಗೆ 1, ಸರಿಯಾದ ದಾಖಲೆಗಳನ್ನು ಹೊಂದದೇ ಇರುವ ಬಗ್ಗೆ 39, ಓವರ್‌ ಲೋಡ್‌ ಹೊಂದಿರುವ ಬಗ್ಗೆ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿರುವುದಾಗಿ ತಿಳಿದುಬಂದಿದೆ. ಈ ವಿಶೇಷ ತಪಾಷಣಾ ಡ್ರೈವ್‌ ನಲ್ಲಿ 5 ಪೊಲೀಸ್‌ ನಿರೀಕ್ಷಕರು, 30 ಪೊಲೀಸ್‌ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.






ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹನದ ಮಿತಿಗೆ ಅನುಸಾರವಾಗಿ ಮಕ್ಕಳ ಸಂಖ್ಯೆ ಹಾಗೂ ಇತರೇ ಸುರಕ್ಷತಾ ಕ್ರಮಗಳನ್ನು ಒಂದು ವಾರದ ಒಳಗೆ ಅಳವಡಿಸಿಕೊಳ್ಳುವಂತೆ ಹಾಗೂ ಈ ಎಲ್ಲಾ ಸೌಲಭ್ಯ ಹಾಗೂ ದಾಖಲಾತಿಗಳನ್ನು ಒಂದು ವಾರದ ಒಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಬಂಧಿತ ಶಾಲಾ ವಾಹನಗಳನ್ನು ಸೀಝ್ ಮಾಡುವ ಬಗ್ಗೆಯೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

error: Content is protected !!
Scroll to Top