
(ನ್ಯೂಸ್ ಕಡಬ) newskadaba.com, ಅ . 23 . ಉಡುಪಿ ಜಿಲ್ಲೆಯ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್ಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ಅಂಡರ್ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಸುರೇಶ್ ಅಮೀನ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ ಪೂಜಾರಿ ಈ ಮಾಹಿತಿಗಳನ್ನು ಬಳಸಿ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ಹಣ ವಸೂಲಿಗೆ ಯತ್ನಿಸುತ್ತಿದ್ದನೆಂದು ಆರೋಪಿಸಲಾಗಿದೆ.ಈ ಸುಲಿಗೆ ಬೆದರಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ (ಪಡುಬಿದ್ರೆ ಠಾಣೆಯಲ್ಲಿ 5, ಹಾಗೂ ಶಿರ್ವ, ಕಾಪು ಮತ್ತು ಮಣಿಪಾಲ ಠಾಣೆಗಳಲ್ಲಿ ತಲಾ 1).
ಹಣ ನೀಡಲು ವಿಫಲರಾಗಿ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದ ಬಗ್ಗೆ ತಾಂತ್ರಿಕ ಸಾಕ್ಷ್ಯಗಳಿಂದ ತಿಳಿದುಬಂದಿದೆ.ಕೃತ್ಯಕ್ಕಾಗಿ ಹೇಮಂತ್ ಪೂಜಾರಿ ಕಳುಹಿಸಿದ್ದ ಹಣದಲ್ಲಿ, ಖರ್ಚಾದದ್ದು ಹೋಗಿ ಉಳಿದ ರೂ. 4.13 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಸುಲಿಗೆ ಜಾಲದ ಇತರರ ಪತ್ತೆಗಾಗಿ ಪೊಲೀಸರ ತನಿಖೆ ಮುಂದುವರಿದಿದೆ.




