(ನ್ಯೂಸ್ ಕಡಬ) newskadaba.com, ಆ.04: ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್‌ಗೆ (ಪ್ರಕ್ಷುಬ್ಧತೆ) ಸಿಲುಕಿದ ಪರಿಣಾಮ ದಿಢೀರ್ 300 ಅಡಿ ಕುಸಿದು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದು, ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ.
AI2379 ವಿಮಾನವು ಬೆಳಿಗ್ಗೆ 8:25ಕ್ಕೆ ಫುಕೆಟ್‌ನಿಂದ ಹೊರಟಿದ್ದು, ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಹಾರಾಟದ ವೇಳೆ ವಿಮಾನವು ಏಕಾಏಕಿ ಸುಮಾರು 300 ಅಡಿ ಕುಸಿದಿದೆ. ಈ ಘಟನೆಗೆ ಕ್ಲಿಯರ್ ಏರ್ ಟರ್ಬುಲೆನ್ಸ್ ಅಥವಾ ಅಪ್‌ಡ್ರಾಫ್ಟ್/ಡೌನ್‌ಡ್ರಾಫ್ಟ್ (ಗಾಳಿಯ ಮೇಲ್ಮುಖ ಹಾಗೂ ಕೆಳಮುಖ ಹರಿವು) ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಟರ್ಬುಲೆನ್ಸ್‌ನಿಂದ ಕೆಲ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದರೂ, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ಪ್ರಕಟಣೆಯಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆಯಾಗಿದ್ದು, ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡಲಾಗಿದೆ ಎಂದು ತಿಳಿಸಿದೆ. ವಿಮಾನದಲ್ಲಿ ಉಂಟಾದ ಈ ಟರ್ಬುಲೆನ್ಸ್ ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಆದರೆ, ವಿಮಾನವು ಯಾವುದೇ ಅಪಾಯವಿಲ್ಲದೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಎಲ್ಲಾ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.






