(ನ್ಯೂಸ್ ಕಡಬ) newskadaba.com, ಮಾ.21 ಎಲ್‌ಪಿಜಿ ಟ್ಯಾಂಕರ್‌ಗಳನ್ನು ಹೊತ್ತುಕೊಂಡು ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಭಾರತಕ್ಕೆ ಬಂದು ತಲುಪಿದ ಬಳಿಕ ಇದೀಗ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲು ಸಿದ್ಧವಾಗಿದೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದರಿಂದ ಮಧ್ಯ ಪ್ರಾಚ್ಯ ರಾಷ್ಟ್ರಗಳ ಸರಕು ಅದರಲ್ಲೂ ಮುಖ್ಯವಾಗಿ ತೈಲ ಸಾಗಣೆಗೆ ಅಡ್ಡಿಯಾಗಿತ್ತು. ಇದು ಜಾಗತಿಕ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಈ ನಡುವೆಯೇ ಇದೀಗ ಈ ಜಲಸಂಧಿ ಮಾರ್ಗದಿಂದ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಬರಲು ಸಿದ್ಧವಾಗಿದೆ.
ಸಂಘರ್ಷದಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಹೊರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರಲಿರುವ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳೊಂದಿಗೆ ನೂರಾರು ಹಡಗುಗಳು ಲಂಗರು ಹಾಕಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಪ್ರಮುಖ ಮಾರ್ಗದ ಮೂಲಕ ಕಚ್ಚಾ ತೈಲ ಸಾಗಣೆ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಎರಡು ಭಾರತೀಯ ಧ್ವಜ ಹೊತ್ತ ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗಲು ತಯಾರಿ ನಡೆಸುತ್ತಿವೆ.
ಹಡಗು ಚಲನೆಯನ್ನು ಆಧರಿಸಿದ ಅಂಕಿ ಅಂಶಗಳ ಪ್ರಕಾರ ವಿರಾಮದ ಬಳಿಕ ಭಾರತಕ್ಕೆ ಬರಲಿರುವ ಹಡಗುಗಳು ಶೀಘ್ರದಲ್ಲೇ ಸಂಚಾರ ಪ್ರಾರಂಭಿಸಬಹುದು. ಸದ್ಯ ಹೆಚ್ಚಿರುವ ಉದ್ವಿಗ್ನತೆಯ ಕಾರಣದಿಂದ ನೂರಾರು ಹಡಗುಗಳು ಲಂಗರು ಹಾಕಿವೆ. ಜಾಗತಿಕ ಮಟ್ಟಕ್ಕೆ ತೈಲ ಸರಬರಾಜಾಗುವ ಹೊರ್ಮುಜ್ ಜಲಸಂಧಿಯು ಕೊಲ್ಲಿ ರಾಷ್ಟ್ರಗಳಿಂದ ಹೊರಹೋಗುವ ಹಡಗುಗಳಿಗೆ ಅಪಾಯಕಾರಿಯಾಗಿದೆ ಎಂದು ಟೆಹರಾನ್ ಎಚ್ಚರಿಸಿದ್ದರಿಂದ ಹಡಗುಗಳ ಸಂಚಾರಕ್ಕೆ ಅಡ್ಡಿಗಳಾಗಿವೆ.
ಮಾರುಕಟ್ಟೆ ಮಾಹಿತಿ ಪ್ರಕಾರ ಶುಕ್ರವಾರಕ್ಕೂ ಮೊದಲ 24 ಗಂಟೆಗಳಲ್ಲಿ ಯಾವುದೇ ಕಚ್ಚಾ ತೈಲ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯನ್ನು ದಾಟಿಲ್ಲ. ಅಮೆರಿಕದ ನಿರ್ಬಂಧಗಳ ಅಡಿಯಲ್ಲಿ ಖಾಲಿ ಕಚ್ಚಾ ಟ್ಯಾಂಕರ್ ಮಾರ್ಚ್ 18 ರಂದು ಇರಾನಿನ ಜಲ ಭಾಗದ ಕಡೆಗೆ ಸಾಗಿತ್ತು.
ಎಲ್‌ಪಿಜಿ ಟ್ಯಾಂಕರ್ ಗಳನ್ನು ಹೊತ್ತಿರುವ ಎರಡು ಭಾರತೀಯ ನೌಕೆಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಬಳಿ ಲಂಗರು ಹಾಕಿಕೊಂಡಿವೆ. ಈ ಎರಡೂ ಹಡಗುಗಳು ಪ್ರಯಾಣಕ್ಕೆ ತಯಾರಿ ನಡೆಸುತ್ತಿರುವ ಸಂಕೇತಗಳನ್ನು ಪ್ರಸಾರ ಮಾಡುತ್ತಿವೆ. ಇವುಗಳು ಶನಿವಾರ ಭಾರತದತ್ತ ಹೊರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಯಾವುದೇ ಅಧಿಕೃತ ಮಾಹಿತಿ ಲಾಭವಾಗಿಲ್ಲ ಎಂದು ಭಾರತದ ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಹಡಗುಗಳು ಸುರಕ್ಷಿತವಾಗಿ ಸಾಗುವಂತೆ ಮಾಡಲು ಭಾರತದ ವಿದೇಶಾಂಗ ಸಚಿವಾಲಯವು ಎಚ್ಚರಿಕೆಯನ್ನು ನೀಡಿದೆ. ಪ್ರಸ್ತುತ ಕೊಲ್ಲಿಯಲ್ಲಿರುವ ಭಾರತದ ನೌಕಾಪಡೆಯ 22 ಹಡಗುಗಳು ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಚಲನೆಯನ್ನು ನಿರ್ಧರಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ.







