(ನ್ಯೂಸ್ ಕಡಬ) newskadaba.com ಜು. 23. ಸಾಮಾಜಿಕ ಜಾಲತಾಣವಾದ X (ಟ್ವಿಟರ್) ನ @gharkekalesh ಖಾತೆಯಲ್ಲಿ ಬೆಕ್ಕು ಹಾಗೂ ವಿಷಕಾರಿ ಕಿಂಗ್ ಕೋಬ್ರಾ ನಡುವಿನ ರೋಚಕ ಮುಖಾಮುಖಿಯ ವಿಡಿಯೋವೊಂದು ತೀವ್ರ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಬಯಲು ಪ್ರದೇಶದಲ್ಲಿ ಎದುರಾದ ಮಾರಣಾಂತಿಕ ಕಿಂಗ್ ಕೋಬ್ರಾಗೆ ಬೆಕ್ಕು ಕಿಂಚಿತ್ತೂ ಹೆದರದೆ ಅತ್ಯಂತ ಧೈರ್ಯದಿಂದ ಮುಖಾಮುಖಿಯಾಯಿತು. ಹಾವು ಇದ್ದಕ್ಕಿದ್ದಂತೆ ದಾಳಿ ಮಾಡಿದಾಗ, ಬೆಕ್ಕು ತನ್ನ ಅಸಾಧಾರಣ ರಿಯಾಕ್ಷನ್ ಟೈಮ್ (ಪ್ರತಿಕ್ರಿಯಿಸುವ ವೇಗ) ಬಳಸಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ಹಿಂಜರಿದು ದಾಳಿಯಿಂದ ಸುಲಭವಾಗಿ ತಪ್ಪಿಸಿಕೊಂಡಿತು. ಬೆಕ್ಕಿನ ತೀಕ್ಷ್ಣ ಚುರುಕುತನಕ್ಕೆ ಹಾವು ದಂಗಾಯಿತು. ನಂತರ ಬೆಕ್ಕು ತನ್ನ ಪಂಜದಿಂದ ಜಾಗ ಖಾಲಿ ಮಾಡುವಂತೆ ಹಾವಿಗೆ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟ ಮುಕ್ತಾಯಗೊಂಡಿತು.
ಬೆಕ್ಕಿನ ಚುರುಕುತನ ಮತ್ತು ಸಾಹಸಕ್ಕೆ ಮನಸೋತ ನೆಟ್ಟಿಗರು, “ಕಿಂಗ್ ಕೋಬ್ರಾ ಅಪಾಯಕಾರಿ ಹೌದಾದರೂ ಬೆಕ್ಕಿಗಿಂತ ಚುರುಕಲ್ಲ” ಹಾಗೂ “ಬೆಕ್ಕುಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು” ಎಂದು ಕಾಮೆಂಟ್ ಮಾಡಿದ್ದಾರೆ.














