‘ನಂದಿನಿ’ ಬ್ರ್ಯಾಂಡ್​ಗೆ ದೇಶದಲ್ಲೇ ಟಾಪ್-4 ಸ್ಥಾನ



(ನ್ಯೂಸ್‌ ಕಡಬ) newskadaba.com ಜು.29 : ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆಮಾತಾಗಿರುವ ಕೆಎಂಎಫ್​ನ ‘ನಂದಿನಿ’ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಟಾಪ್​​​​-4 ಬ್ರ್ಯಾಂಡ್​ ಆಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಭಾರತೀಯ ಟಾಪ್​​-100 ಬ್ರ್ಯಾಂಡ್​ಗಳಲ್ಲಿ ನಂದಿನಿಯು 38ನೇ ಸ್ಥಾನ ಅಲಂಕರಿಸಿದೆ.







ವಿಶ್ವದಾದ್ಯಂತ ಬ್ರ್ಯಾಂಡ್​ಗಳ ಮೌಲ್ಯಮಾಪನಕ್ಕೆ ಹೆಸರಾಗಿರುವ ಬ್ರ್ಯಾಂಡ್​ ಫೈನಾನ್ಸ್​ ಸಂಸ್ಥೆ ಲಂಡನ್​ನಲ್ಲಿ ಬಿಡುಗಡೆ ಮಾಡಿದ ಈ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಸಹಕಾರಿ ಕ್ಷೇತ್ರದ ನಂದಿನಿಯು ದೇಶದ ಅತ್ಯುತ್ತಮ ಬ್ರ್ಯಾಂಡ್​ಗಳ ಪಟ್ಟಿಗೆ ಸೇರಿದೆ. ದೇಶದ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ನಾಲ್ಕನೇ ಉತ್ತಮ ಬ್ರ್ಯಾಂಡ್​ ಎನಿಸಿದೆ.






ಕಳೆದ ವರ್ಷವೂ ಬ್ರ್ಯಾಂಡ್​​ ಫೈನಾನ್ಸ್​​ ಸಂಸ್ಥೆ ಬಿಡುಗಡೆ ಮಾಡಿದ ರ‍್ಯಾಂಕಿಂಗ್​ನಲ್ಲಿ ಕೆಎಂಎಫ್​ನ ನಂದಿನಿ​​ ನಾಲ್ಕನೇ ಸ್ಥಾನಗಳಿಸಿತ್ತು. ಈಗ 2025ರಲ್ಲೂ ಸಹ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಗಳಿಸಿದ ನಾಲ್ಕನೇ ಶ್ರೇಷ್ಠ ಬ್ರ್ಯಾಂಡ್​ ಎನ್ನುವ ತನ್ನ ರ‍್ಯಾಂಕಿಂಗ್​ ಅನ್ನು ಉಳಿಸಿಕೊಂಡಿದೆ.

“ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಉತ್ತಮ ಬ್ರ್ಯಾಂಡ್​ಗಳ ಕುರಿತ ವರದಿಯಲ್ಲಿ ದೇಶೀಯ ಆಹಾರ ಮತ್ತು ಪಾನೀಯ ವಲಯದಲ್ಲಿ ಗುಜರಾತ್ ಮೂಲದ ಅಮೂಲ್ ಟಾಪ್​-1, ಮದರ್​ ಡೈರಿ ಟಾಪ್​-2, ಬ್ರಿಟಾನಿಯಾ ಟಾಪ್​-3, ಕೆಎಂಎಫ್ ನಂದಿನಿ ಟಾಪ್-4 ಹಾಗೂ ಡಾಬರ್ ಟಾಪ್-5ನೇ ಸ್ಥಾನವನ್ನು ಪಡೆದಿವೆ” ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಲಂಡನ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ರ್ಯಾಂಡ್​​ ಫೈನಾನ್ಸ್​ ಸಂಸ್ಥೆಯು ಪ್ರತಿ ವರ್ಷ 25 ದೇಶಗಳಲ್ಲಿ ನೂರು ವಿವಿಧ ವಲಯಗಳ ಸುಮಾರು 6,000 ಸಂಸ್ಥೆಗಳ ಮೌಲ್ಯಮಾಪನ ನಡೆಸಿ ಉತ್ತಮ ಬ್ರ್ಯಾಂಡ್​ ಹೊಂದಿರುವ ಸಂಸ್ಥೆಗಳಿಗೆ ರ‍್ಯಾಂಕ್​ ನೀಡುತ್ತದೆ. ನಂದಿನಿಯು ಆಹಾರ ಮತ್ತು ಪಾನೀಯ ವಲಯದಲ್ಲಿ ಮಾತ್ರವಲ್ಲದೆ, ಭಾರತದ ಎಲ್ಲಾ ವಲಯಗಳ ಬ್ರ್ಯಾಂಡ್​ಗಳ ರ‍್ಯಾಂಕಿಂಗ್​ನಲ್ಲಿಯೂ ಉತ್ತಮ ಸ್ಥಾನ ಗಳಿಸಿದೆ.

ಕಳೆದ ವರ್ಷ ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ ಟಾಪ್​-100 ರ‍್ಯಾಂಕಿಂಗ್​ ವರದಿಯಲ್ಲಿ 43ನೇ ಸ್ಥಾನಗಳಿಸಿದ್ದ ನಂದಿನಿ, ಈ ವರ್ಷದ​​ ಪಟ್ಟಿಯಲ್ಲಿ ದೇಶದ ಟಾಪ್​ 38ನೇ ಉತ್ತಮ ಬ್ರ್ಯಾಂಡ್ ಎಂಬ​ ಹೆಗ್ಗಳಿಕೆಗೆ ಪಾತ್ರವಾಗಿದೆ.

error: Content is protected !!
Scroll to Top