(ನ್ಯೂಸ್ ಕಡಬ) newskadaba.com ನವದೆಹಲಿ, ಜ.08. ಪೇಪರ್ ಕಟರ್ನಿಂದ ಕೊಂದು ಸ್ನೇಹಿತನ ದೇಹವನ್ನು ಸುಟ್ಟು ಹಾಕಿದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ವರದಿಯಾಗಿದೆ.
ಬಂಧಿತ ಆರೋಪಿಯನ್ನು ವಜೀರಾಬಾದ್ ನಿವಾಸಿ ಮುನಿಶಿದ್ಧೀನ್ (27) ಎಂದು ಗುರುತಿಸಲಾಗಿದೆ.
ಮುನಿಶಿದ್ಧೀನ್ ತನ್ನ ಸ್ನೇಹಿತನಾದ ರಶೀದ್ ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಜೀರಾಬಾದ್ನ ರಾಮ್ ಘಾಟ್ನ ಮುಂಭಾಗದಲ್ಲಿ ಸುಟ್ಟ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ದೇಹವು ಸುಮಾರು ಶೇ 90 ರಷ್ಟು ಸುಟ್ಟಿದೆ ಎಂದು ಅವರು ಹೇಳಿದರು. ಅಲ್ಲದೆ ಸ್ಥಳದ ಸಮೀಪ ಪೊದೆಗಳಲ್ಲಿ ರಕ್ತ ಪತ್ತೆಯಾಗಿದೆ. ಸ್ಥಳದಿಂದ ಪೇಪರ್ ಕಟರ್ ಮತ್ತು ಬೆಂಕಿಕಡ್ಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೃತನನ್ನು ವಜೀರಾಬಾದ್ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮುನಿಶಿದ್ಧೀನ್ ಮತ್ತು ರಶೀದ್ ಅವರು ಪ್ಲಂಬರ್ ಮತ್ತು ಎಲೆಕ್ಟ್ರಿಷಿಯನ್ ಆಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು,ಮತ್ತು ನಿಕಟ ಸ್ನೇಹಿತರಾದರು ಎನ್ನಲಾಗಿದೆ. ಅವರು ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮುನಿಶಿದ್ದೀನ್ ಹಾಗೂ ರಶೀದ್ ಪತ್ನಿ ನಡುವೆ ಪ್ರೀತಿ ಶುರುವಾಗಿದೆ ಎಂದು ತಿಳಿದುಬಂದಿದೆ. ರಶೀದ್ ಮದ್ಯ ಸೇವಿಸಿ ತನ್ನ ಪತ್ನಿಗೆ ಥಳಿಸುತ್ತಿದ್ದ. ಇದರಿಂದ ಮುನಿಶಿದ್ಧೀನ್ ಮತ್ತು ಮಹಿಳೆ ಆನತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.