(ನ್ಯೂಸ್ ಕಡಬ) newskadaba.com ಜು. 16: ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಅನುಭವಿ ವಿಜ್ಞಾನಿಗಳು ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿರುವುದನ್ನು ತಡೆಯಲು ಕೇಂದ್ರ ಬಾಹ್ಯಾಕಾಶ ಇಲಾಖೆ ಕಠಿಣ ಆಂತರಿಕ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಜುಲೈ 14ರ ಹೊಸ ನಿಯಮದ ಪ್ರಕಾರ, ಇಸ್ರೋದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಇನ್ನು ಮುಂದೆ ಸ್ಥಳೀಯ ಮಟ್ಟದಲ್ಲಿ ಅಂಗೀಕರಿಸುವಂತಿಲ್ಲ.
ಇದುವರೆಗೆ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರಿಗಿದ್ದ ಈ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಇನ್ಮುಂದೆ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಉನ್ನತ ಮಟ್ಟದ ಸಮಿತಿಯೇ ರಾಜೀನಾಮೆ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ಬಳಿಕ ಸ್ಕೈರೂಟ್, ಅಗ್ನಿಕುಲ್ ನಂತಹ ಸ್ಟಾರ್ಟ್‌ಅಪ್‌ಗಳು ಇಸ್ರೋದ ಅನುಭವಿ ವಿಜ್ಞಾನಿಗಳಿಗೆ ಹೆಚ್ಚಿನ ಸಂಬಳ ಹಾಗೂ ಆಕರ್ಷಕ ಹುದ್ದೆಗಳನ್ನು ನೀಡಿ ಸೆಳೆಯುತ್ತಿವೆ. ಇದರೊಂದಿಗೆ ಇಸ್ರೋದಲ್ಲಿನ ನಿಧಾನಗತಿಯ ಪದೋನ್ನತಿ ಹಾಗೂ ಆಡಳಿತಾತ್ಮಕ ಒತ್ತಡದಿಂದಾಗಿ ವಿಜ್ಞಾನಿಗಳು ಸಂಸ್ಥೆ ತೊರೆಯುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ಪ್ರಸ್ತುತ ಇಸ್ರೋ ‘ಗಗನಯಾನ’ದಂತಹ ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಸಮಯದಲ್ಲಿ ‘ಗ್ರೂಪ್-ಎ’ ದರ್ಜೆಯ ಅನುಭವಿ ವಿಜ್ಞಾನಿಗಳು ಏಕಾಏಕಿ ಹೊರನಡೆದರೆ ಆ ಸ್ಥಾನವನ್ನು ತಕ್ಷಣ ಭರ್ತಿ ಮಾಡುವುದು ಸುಲಭವಲ್ಲ. ಇದರಿಂದ ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳ ವೇಳಾಪಟ್ಟಿಗೆ ಧಕ್ಕೆಯಾಗುವ ಆತಂಕ ಸರ್ಕಾರಕ್ಕಿದೆ. ಹೀಗಾಗಿ ಪ್ರತಿಭಾ ಪಲಾಯನಕ್ಕೆ ಕಡಿವಾಣ ಹಾಕಲು ಕೇಂದ್ರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.







