(ನ್ಯೂಸ್ ಕಡಬ) newskadaba.com,ಜೂ.20: ಬ್ರಿಟನ್‌ನ ಲಂಡನ್ ನಗರದ ಉತ್ತರ ಭಾಗದಲ್ಲಿರುವ ಬೆಡ್‌ಫೋರ್ಡ್ ಪ್ರದೇಶದ ಸಮೀಪ ಶುಕ್ರವಾರ ಸಂಜೆ ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಓರ್ವ ರೈಲು ಚಾಲಕ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ ಸುಮಾರು 5:15ರ ವೇಳೆಗೆ ಬೆಡ್‌ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಎರಡೂ ರೈಲುಗಳು ದಕ್ಷಿಣ ದಿಕ್ಕಿನಲ್ಲಿ ಲಂಡನ್‌ನ ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದತ್ತ ಸಂಚರಿಸುತ್ತಿದ್ದವು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಏರ್ ಆಂಬುಲೆನ್ಸ್ ಸೇರಿದಂತೆ ತುರ್ತು ಸೇವಾ ಸಿಬ್ಬಂದಿ ಜಂಟಿಯಾಗಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮೃತಪಟ್ಟ ವ್ಯಕ್ತಿ ರೈಲು ಚಾಲಕ ಎಂಬುದನ್ನು ರೈಲ್ವೆ, ಸಮುದ್ರ ಮತ್ತು ಸಾರಿಗೆ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಡ್ಡಿ ಡೆಂಪ್ಸಿ ಖಚಿತಪಡಿಸಿದ್ದಾರೆ. ರೈಲು ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಒಕ್ಕೂಟ ತಿಳಿಸಿದೆ. ಸ್ಥಳದಲ್ಲಿ ಸದ್ಯ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.









