ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಸ್ನೇಹಿತರ ದುರಂತ ಅಂತ್ಯ

ಕಾರಿಗೆ ಬೆಂಕಿ ಹತ್ತಿಕೊಂಡು ನಾಲ್ವರು ಸಜೀವ ದಹನ

(ನ್ಯೂಸ್‌ ಕಡಬ) newskadaba.com, ಅ 26 . ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೇವಸ್ಥಾನದ ದರ್ಶನ ಮುಗಿಸಿ ಮರಳುತ್ತಿದ್ದ ನಾಲ್ವರು ಯುವಕರು ಕಾರಿನಲ್ಲೇ ಸಜೀವ ದಹನಗೊಂಡಿದ್ದಾರೆ.

ಸಾಂಗೋರ್ ಗ್ರಾಮದ ಐವರು ಸ್ನೇಹಿತರು ಸ್ವಿಫ್ಟ್ ಕಾರಿನಲ್ಲಿ ಸಾಂವರಿಯಾ ಸೇಠ್ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ, ಲೇಬಡ್–ನಾಯಗಾಂವ್ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿ ಚಾಲಕನ ಬದಿಯ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದು ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಕ್ಷಿಪ್ರವಾಗಿ ಆವರಿಸಿದ್ದರಿಂದ ಕಾರಿನಲ್ಲಿದ್ದ ನಾಲ್ವರು ಯುವಕರು ಹೊರಬರಲಾಗದೆ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರಿನಿಂದ ಹೊರಗೆ ಬಿದ್ದ ಮತ್ತೊಬ್ಬ ಯುವಕ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Scroll to Top