(ನ್ಯೂಸ್ ಕಡಬ) newskadaba.com, ಸೆ.08 : ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಗೆಲ್ಲುವ ನಿರೀಕ್ಷೆ ಇದ್ದರೂ ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಪ್ರತಿ ಮತವನ್ನು ಕೂಡ ಲೆಕ್ಕ ಹಾಕುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯುತ್ತದೆ. ಹೀಗಾಗಿ ಎಲ್ಲ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸುತ್ತಾರೆ. ಹೀಗಾಗಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲಾ ಸಂಸತ್ ಸದಸ್ಯರು ರಹಸ್ಯ ಮತದಾನದ ಮೂಲಕ ತಮ್ಮ ಮತ ಚಲಾಯಿಸುತ್ತಾರೆ. ಹೆಚ್ಚಾಗಿ ಇದು ಪಕ್ಷದ ಆಧಾರದ ಮೇಲೆಯೇ ನಡೆಯುತ್ತದೆ. ಆದರೂ ಅಡ್ಡ ಮತದಾನವಾಗುವ ಸಾಧ್ಯತೆ ಇರುತ್ತದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಮತ್ತು ಮಾಜಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿಯು ಈ ಹಿಂದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದವು. ಹೀಗಾಗಿ 2022ರಲ್ಲಿ ಜಗದೀಪ್ ಧಂಖರ್ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದರು. ಇದರಲ್ಲಿ ವೈಎಸ್ಆರ್ ಕಾಂಗ್ರೆಸ್ ಮತ್ತು ಆಗಿನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ಮತಗಳು ಸೇರಿದ್ದವು.










