ಪಿಜಕಳ: ಆರೋಗ್ಯ ತಪಾಸಣ ಶಿಬಿರ, ಶಾಲಾ ಕೈತೋಟ ಉದ್ಘಾಟನೆ ಮಕ್ಕಳಿಗೆ ಕೃಷಿ ಸಂಸ್ಕೃತಿಯತ್ತ ಒಲವು ಮೂಡಿಸಬೇಕು: ಬೆಳ್ಳಿಪ್ಪಾಡಿ ರಾಜೇಂದ್ರ ರೈ



(ನ್ಯೂಸ್ ಕಡಬ) newskadaba.com ಜು. 23. ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಕೃಷಿಯ ಬಗ್ಗೆ  ಆಸಕ್ತಿ ವಹಿಸದಿರುವುದು ವಿಷಾದದ ಸಂಗತಿಯಾಗಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಕೃಷಿ ಸಂಸ್ಕೃತಿಯತ್ತ ಒಲವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ  ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಅಭಿಪ್ರಾಯಪಟ್ಟರು.







 

ಅವರು  ಕಡಬ ತಾಲೂಕಿನ ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣ ಶಿಬಿರ ಹಾಗೂ ಪ್ರತಿಷ್ಠಾನದ ಆರ್ಥಿಕ ನೆರವಿನಿಂದ ಬೇಲಿ ನಿರ್ಮಿಸಿದ ಶಾಲೆಯ ಕೈತೋಟವನ್ನು  ಉದ್ಘಾಟಿಸಿ ಮಕ್ಕಳಿಗೆ ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದರು.






 

ಈ ಹಿಂದೆ ವಿಜಯ ಬ್ಯಾಂಕ್‌ನ ಮೂಲಕ ಆರಂಭಗೊಂಡ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇಂದು ಬ್ಯಾಂಕ್‌ ಆಫ್‌ ಬರೋಡದ ಅಧೀನದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಮುಖ್ಯವಾಗಿ ಜನರನ್ನು ಕೌಶಲಯುಕ್ತ ತರಬೇತಿಗಳ ಮೂಲಕ ಸ್ವ ಉದ್ಯೋಗಕ್ಕೆ ಸಿದ್ಧಗೊಳಿಸಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಹಾಗೂ ತರಬೇತಿಗಳನ್ನು ಹಮ್ಮಿಕೊಳ್ಳುವುದು ಪ್ರತಿಷ್ಠಾನದ ಪ್ರಧಾನ ಕೆಲಸಗಳಲ್ಲಿ ಒಂದಾಗಿದೆ.

 

ಕಡಬ ಪರಿಸರದಲ್ಲಿ  ಹೊಲಿಗೆ ತರಬೇತಿ ಶಿಬಿರಗಳು, ಜೇನು ಕೃಷಿ ತರಬೇತಿ, ರಬ್ಬರ್‌ ಟ್ಯಾಪಿಂಗ್‌ ತರಬೇತಿ ರಬ್ಬರ್‌ ಮರಗಳಿಗೆ ಪ್ಲಾಸ್ಟಿಕ್‌ ಕವಚ ತೊಡಿಸುವುದು ಮುಂತಾದ ತರಬೇತಿಗಳನ್ನು ನೀಡಲಾಗಿದೆ. ವಿಶೇಷವಾಗಿ ಕೃಷಿ ಸಂಬಂಧಿತ ತರಬೇತಿಗಳನ್ನು ಕೂಡ ನಡೆಸಲಾಗಿದೆ ಎಂದು  ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶ್ರಫ್‌  ಎ. ಅವರು ಮಾತನಾಡಿ  ಗ್ರಾಮೀಣ ಸರಕಾರಿ ಕನ್ನಡಮಾಧ್ಯಮ  ಶಾಲೆಗಳು ಉಳಿಯಬೇಕಾದರೆ ಸಮುದಾಯ ಸಹಕಾರ ಅತ್ಯಗತ್ಯ. ಶಾಲೆಯ ಚಟುವಟಿಕೆಗೆ ನೆರವು ನೀಡಿದ ಪ್ರತಿಷ್ಠಾನದ ಪ್ರಮುಖರಿಗೆ ನಾವು ಕೃತಜ್ಞರಾಗಿದ್ದೇವೆ ಎಂದರು.

 

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್‌ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್‌ ಎನ್‌.ಕೆ., ಕಡಬ ಪಟ್ಟಣ ಪಂಚಾಯತ್‌ ಸದಸ್ಯ ದಯಾನಂದ ಗೌಡ ಪಿಜಕಳ, ಮುಖ್ಯಶಿಕ್ಷಕ ವೆಂಕಟ್ರಮಣ ಕೆ. ಶುಭಹಾರೈಸಿದರು. ಪಿಜಕಳ ಕುಮಾರಧಾರ ಯುವಕ ಮಂಡಲದ ಅಧ್ಯಕ್ಷ ಹರೀಶ್‌ ಕಂಗುಳೆ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮೋಹಿನಿ, ಶಿಕ್ಷಕ ಅಜಿತ್‌ಕುಮಾರ್‌ ಆಳ್ವ, ಶಿಕ್ಷಕಿ ಕವಿತಾ ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ಕೃಷ್ಣಜ್ಯೋತಿ ಸ್ವಾಗತಿಸಿ, ದಿವ್ಯಶ್ರೀ  ನಿರೂಪಿಸಿದರು. ಹೇಮಲತಾ  ವಂದಿಸಿದರು.

error: Content is protected !!
Scroll to Top