ಟ್ರಾಫಿಕ್ ದಂಡ ವಸೂಲಿಗೆ ಕರೆಂಟ್ ಶಾಕ್: ವಿದ್ಯುತ್ ಬಿಲ್‌ಗೆ ಇ-ಚಲನ್ ಲಿಂಕ್ ಮಾಡಲು ಸುಪ್ರೀಂ ಸಲಹೆ!

(ನ್ಯೂಸ್ ಕಡಬ) newskadaba.com, ಸೆ. 29. ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಹೊಸ ಮಾರ್ಗವನ್ನು ನೀಡಿದೆ. ಟ್ರಾಫಿಕ್ ಫೈನ್ ಹಣವನ್ನು ವಿದ್ಯುತ್ ಬಿಲ್ ಜೊತೆ ಲಿಂಕ್ ಮಾಡಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.


“ಜನರು ಟ್ರಾಫಿಕ್ ಫೈನ್ ಕಟ್ಟದಿದ್ದರೆ, ಅದನ್ನು ವಿದ್ಯುತ್ ಬಿಲ್‌ಗೆ ಸೇರಿಸಿ. ಕರೆಂಟ್ ಕಟ್ ಆಗುವ ಭಯಕ್ಕೆ ಅವರು ಬಿಲ್ ಪಾವತಿಸಲೇಬೇಕಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ. ದೇಶಾದ್ಯಂತ ಒಟ್ಟು ₹45,000 ಕೋಟಿ ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ ಕೇವಲ ₹25,000 ಕೋಟಿ ಮಾತ್ರ ವಸೂಲಿಯಾಗಿದ್ದು, ಇನ್ನೂ ₹20,000 ಕೋಟಿ ದಂಡದ ಮೊತ್ತ ಬಾಕಿ ಉಳಿದಿದೆ ಎಂದು ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.


ದಂಡ ಪಾವತಿಸದ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಹಾಗೂ ಅವುಗಳ ಮಾಲೀಕತ್ವ ವರ್ಗಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದೆ.ಕೇವಲ ಇ-ಚಲನ್ ವಿತರಿಸಿದರೆ ಸಾಲದು, ದಂಡ ವಸೂಲಿ ಮಾಡುವುದು ಮುಖ್ಯ. ಇದಕ್ಕೆ ಸರ್ಕಾರಗಳು ಸೂಕ್ತ ಮತ್ತು ಕ್ರಿಯಾತ್ಮಕ ಮಾರ್ಗ ಕಂಡುಕೊಳ್ಳಲೇಬೇಕು ಎಂದು ಪೀಠ ಹೇಳಿದೆ.

Scroll to Top