ಜಮ್ಮು ಕಾಶ್ಮೀರ: ಭೀಕರ ಮಳೆಯ ಪರಿಣಾಮ ಸಾವಿನ ಸಂಖ್ಯೆ 41 ಕ್ಕೆ ಏರಿಕೆ-ಕೇಂದ್ರದಿಂದ ನೆರವಿನ ಭರವಸೆ

(ನ್ಯೂಸ್‌ ಕಡಬ) newskadaba.com, ಆ.28: ಶ್ರೀನಗರ: ಭೀಕರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ತತ್ತರಿಸಿ ಹೋಗಿದ್ದು, ಭೂ ಕುಸಿತ, ಪ್ರವಾಹ ಹಾಗೂ ಮಳೆಯಿಂದಾಗಿ ಸಂಭವಿಸಿದ ಅನಾಹುತದಿಂದ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಕಳೆದೆರಡು ದಿನಗಳಿಂದ ನಿರಂತರ ಮಳೆಯಿಂದಾಗಿ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. ಇದರ ಜೊತೆಗೆ ಮಳೆ ಸಂಬಂಧಿತ ಅವಘಡದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ರೆಸಾಯಿಯ ಅರ್ಧ್ ಕುವರಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಅತಿಹೆಚ್ಚಿನ ಸಾವು ನೋವು ಇಲ್ಲಿ ಸಂಭವಿಸಿದೆ. ಇವರೆಲ್ಲರೂ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಪಂಜಾಬ್ನಿಂದ ಆಗಮಿಸಿದ್ದ ಯಾತ್ರಾರ್ಥಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಕನಿಷ್ಠ ಇತರ 20 ಮಂದಿ ಗಾಯಗೊಂಡಿದ್ದಾರೆ. ದೋಡಾದಲ್ಲಿ ನಾಲ್ಕು ಸಾವು ವರದಿಯಾಗಿದೆ. ಭೂಕುಸಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 9 ಲಕ್ಷ ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೂಕುಸಿತ ಘಟನೆಯಲ್ಲಿ ಮೃತಪಟ್ಟ ರಾಜ್ಯದ ಯಾತ್ರಿಕರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Scroll to Top