(ನ್ಯೂಸ್ ಕಡಬ) newskadaba.com ಜು. 26. ಬಿಹಾರದ ಬೋಧ್ ಗಯಾದ BMP-3 ಪರೇಡ್ ಮೈದಾನದಲ್ಲಿ ಗೃಹ ರಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ಮಹಿಳೆಯೊಬ್ಬರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಚಾಲಕ ಮತ್ತು ಟೆಕ್ನೀಷಿಯನ್‌ನಿಂದ ಅತ್ಯಾಚಾರಕ್ಕೊಳಗಾದ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ ಆನಂದ್ ಕುಮಾರ್ ಅವರ ಪತ್ರಿಕಾ ಪ್ರಕಟಣೆಯ ಪ್ರಕಾರ, ಓಟದ ಸ್ಪರ್ಧೆಯ ವೇಳೆ ಮಹಿಳೆಯು ಮೂರ್ಛೆ ಹೋಗಿದ್ದರಿಂದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಟೆಕ್ನೀಷಿಯನ್ ಅಜಿತ್ ಕುಮಾರ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಇಬ್ಬರೂ ಆರೋಪಿಗಳನ್ನು ಎರಡು ಗಂಟೆಗಳೊಳಗೆ ಬಂಧಿಸಲಾಗಿದೆ.
ಬೋಧ್ ಗಯಾದ SDPO ಸೌರಭ್ ಜೈಸ್ವಾಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಫೊರೆನ್ಸಿಕ್ ತಂಡವು ಸಾಕ್ಷ್ಯ ಸಂಗ್ರಹಕ್ಕೆ ತೆರಳಿದ್ದು, ಸ್ಥಳದ CCTV ದೃಶ್ಯಾವಳಿಗಳು ಆರೋಪಿಗಳ ಗುರುತಿಸುವಿಕೆಗೆ ಸಹಾಯಕವಾಗಿವೆ. ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.









