ಸುಪ್ರೀಂ ಕೋರ್ಟ್ ಮಹತ್ವದ ಆದೇಶ: 7 ರಾಜ್ಯಗಳಲ್ಲಿ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com, ಸೆ.05. ಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ನೀಗಿಸಲು ಹಾಗೂ ಅನುಭವಿ ಜಡ್ಜ್‌ಗಳ ಸೇವೆಯನ್ನು ಬಳಸಿಕೊಳ್ಳಲು ದೇಶದ 7 ರಾಜ್ಯಗಳಲ್ಲಿ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ವಯೋಮಿತಿ ಏರಿಕೆ ಎಲ್ಲರಿಗೂ ನೇರವಾಗಿ ಅನ್ವಯಿಸುವುದಿಲ್ಲ. 60 ವರ್ಷ ತುಂಬಿದ ನಂತರ ನ್ಯಾಯಾಧೀಶರ ಕಾರ್ಯಕ್ಷಮತೆ, ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಆಯಾ ಹೈಕೋರ್ಟ್ ಮೌಲ್ಯಮಾಪನ ಮಾಡಿ, ಅರ್ಹರಿಗೆ ಮಾತ್ರ 2 ವರ್ಷಗಳ ಸೇವಾ ವಿಸ್ತರಣೆ ನೀಡಲಿದೆ.

ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಿಂ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಈ ಬದಲಾವಣೆಗೆ ಸಮ್ಮತಿಸಿದ್ದು, ಮುಂದಿನ 2 ತಿಂಗಳೊಳಗೆ ಸೇವಾ ನಿಯಮ ತಿದ್ದುಪಡಿ ಮಾಡಿ ಅಧಿಕೃತ ಆದೇಶ ಹೊರಡಿಸಬೇಕಿದೆ.ನಿಯಮಗಳು ಜಾರಿಗೆ ಬರುವ ಮುನ್ನವೇ 60 ವರ್ಷ ಪೂರೈಸುವ ಅಧಿಕಾರಿಗಳನ್ನು ತಕ್ಷಣಕ್ಕೆ ನಿವೃತ್ತಿಗೊಳಿಸದೆ, 62 ವರ್ಷಗಳವರೆಗೆ ಸೇವೆಯಲ್ಲಿ ಮುಂದುವರಿಸಲು ಕೋರ್ಟ್ ಸೂಚಿಸಿದೆ.

ಆಂಧ್ರಪ್ರದೇಶ, ಕೇರಳ, ಗುಜರಾತ್, ಯುಪಿ, ಬಿಹಾರ, ಪಂಜಾಬ್ ಸೇರಿದಂತೆ ಇತರ ರಾಜ್ಯಗಳು ಹಾಗೂ ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ತಮ್ಮ ನಿಲುವನ್ನು ಮರುಪರಿಶೀಲಿಸಿ ವರದಿ ಸಲ್ಲಿಸಲು 2 ವಾರಗಳ ಗಡುವು ನೀಡಲಾಗಿದೆ.

Scroll to Top