(ನ್ಯೂಸ್ ಕಡಬ) newskadaba.com, ಜು.16. ನವದೆಹಲಿ: ಭಾರತ-ಪಾಕಿಸ್ತಾನ “ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳಿರುವ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 66 ದಿನಗಳಲ್ಲಿ 23 ಬಾರಿ ಪುನರಾವರ್ತನೆ ಆಗಿರುವುದಾಗಿ ತಿಳಿಸಿದ್ದಾರೆ.
ಜುಲೈ 21 ರಿಂದ ಸಂಸತ್ತು ಪುನರಾರಂಭವಾಗಲಿದ್ದು, ಪ್ರಧಾನಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸ್ಪಷ್ಟವಾಗಿ ಉತ್ತರಿಸಬೇಕಾಗಿದೆ. ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಜಾರಿ ಕುರಿತು ಟ್ರಂಪ್ ಹೇಳಿಕೆ ಕುರಿತು ರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಪರಮಾಣು ಯುದ್ಧವಾಗಿ ಬದಲಾಗಬಹುದಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರದ ಮೂಲಕ ನಿಲ್ಲಿಸಿದ್ದೇವೆ ಎಂದು ಟ್ರಂಪ್ ಸೋಮವಾರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದರು.










