(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಪೊಲೀಸ್ ಪರೀಕ್ಷೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಪಾಸಾಗಿದ್ದು, ಅಲ್ಲದೆ ಇಬ್ಬರೂ ಜೊತೆಯಾಗಿ ನೇಮಕಾತಿಯನ್ನು ಪಡೆದಿರುವ ಅಪರೂಪದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹಾಪುರದ ನಿವೃತ್ತ ಯೋಧ ಯಶ್ಪಾಲ್ ಸಿಂಗ್ ಮತ್ತು ಅವರ 21 ವರ್ಷದ ಮಗ ಶೇಖರ್ ಎರಡೂವರೆ ವರ್ಷಗಳ ತಯಾರಿಯ ನಂತರ ಯುಪಿ ಪೊಲೀಸ್ ಪರೀಕ್ಷೆಯನ್ನು ಒಟ್ಟಿಗೆ ಪಾಸ್ ಮಾಡಿ ಇದೀಗ ಪೊಲೀಸ್ ಕಾನ್ಸ್ಟೇಬಲ್ಗಳಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ನೇಮಕಾತಿ ಪತ್ರ ಪಡೆದರು.
ಸೇನೆಯಲ್ಲಿ ಹದಿನಾರು ವರ್ಷ ಸೇವೆ ಸಲ್ಲಿಸಿ 2019ರಲ್ಲಿ ಸ್ವಯಂ ನಿವೃತ್ತಿ ಪಡೆದ ಯಶ್ಪಾಲ್ ಸಿಂಗ್, ಬಳಿಕ ಅಲ್ಪಕಾಲ ದೆಹಲಿಯ ಆರ್ಮಿ ಆರ್ಡಿನೆನ್ಸ್ ಕಾಪ್ಸ್ ನಲ್ಲಿ ಕರ್ತವ್ಯದಲ್ಲಿದ್ದರು. ಇದೇ ವೇಳೆ ಮಗ ಶೇಖರ್ ಶಾಲಾ ಶಿಕ್ಷಣ ಮುಗಿಸಿ ವೃತ್ತಿ ಕಂಡುಕೊಳ್ಳುವ ಹುಡುಕಾಟದಲ್ಲಿದ್ದ. ಪೊಲೀಸ್ ಆಗಬೇಕು ಎಂಬ ಕನಸು ಕಾಣುತ್ತಿದ್ದ. ತಂದೆ-ಮಗನ ಸಂಭಾಷಣೆ ಇದಕ್ಕೆ ಸ್ಪಷ್ಟ ರೂಪು ನೀಡಿದ್ದು, ತಂದೆ ಯಶ್ಪಾಲ್ ನಗರ್ ಕಳೆದ ಎರಡೂವರೆ ವರ್ಷಗಳಿಂದ ತಮ್ಮ ಹಿರಿಯ ಮಗ ಶೇಖರ್ ಜೊತೆ ಯುಪಿ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದರು. ಯಶ್ಪಾಲ್ ತಮ್ಮ ಮಗನೊಂದಿಗೆ ಗ್ರಂಥಾಲಯಕ್ಕೆ ಹೋಗುತ್ತಿದ್ದರು ಮತ್ತು ಇಬ್ಬರೂ ಅಲ್ಲಿ ತಯಾರಿ ನಡೆಸುತ್ತಿದ್ದರು. ಹೀಗಾಗಿ ಅವರ ಪ್ರಯತ್ನ ಫಲ ನೀಡಿದೆ.










