ಕಾವೇರಿ ವಿವಾದ: ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸದಂತೆ ಪ್ರಾಧಿಕಾರ ಸೂಚನೆ



(ನ್ಯೂಸ್ ಕಡಬ) newskadaba.com ಜು. 15. ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಸದ್ಯಕ್ಕೆ ಕೆಆರ್ಎಸ್ ಅಣೆಕಟ್ಟಿನಿಂದ ನೀರು ಹರಿಸದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಪ್ರಾಧಿಕಾರವು ಉಭಯ ರಾಜ್ಯಗಳಿಗೆ ಸೂಚನೆ ನೀಡಿದೆ. ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.







ರಾಜ್ಯದ ಪರವಾಗಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು, ಜುಲೈ ಮಧ್ಯಭಾಗ ಬಂದರೂ ವಾಡಿಕೆಯಂತೆ ಮಳೆಯಾಗಿಲ್ಲ. ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆಯಿದ್ದು, ಬಹುತೇಕ ಕಡೆ ಡೆಡ್ ಸ್ಟೋರೇಜ್ ತಲುಪಿದೆ. ಪ್ರಸ್ತುತ ಲಭ್ಯವಿರುವ ನೀರನ್ನು ಕೃಷಿಗೆ ಬಳಸದೆ ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಲಾಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ; ಮುಂದೆ ಮಳೆಯಾದರೆ ಸಂಕಷ್ಟ ಸೂತ್ರದಂತೆ ನೀರು ಬಿಡಲು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.






ಕರ್ನಾಟಕದ ವಾದವನ್ನು ಒಪ್ಪದ ತಮಿಳುನಾಡು ಅಧಿಕಾರಿಗಳು, ಸಂಕಷ್ಟ ಸೂತ್ರದ ಪ್ರಕಾರ ಕರ್ನಾಟಕ ವರ್ಷದ ನೀರನ್ನು ಹರಿಸಿಲ್ಲ ಎಂದು ಆರೋಪಿಸಿ, ನೀರು ಬಿಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಉಭಯ ರಾಜ್ಯಗಳ ವಾದಪ್ರತಿವಾದಗಳನ್ನು ಆಲಿಸಿದ ಪ್ರಾಧಿಕಾರದ ಅಧಿಕಾರಿಗಳು, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

error: Content is protected !!
Scroll to Top