ಗುರುಪುರ ಸಮೀಪ ಅನಧಿಕೃತ ಗುಡ್ಡ ಕಟಾವಿನಿಂದ ಭಾರೀ ಭೂಕುಸಿತ: 3 ಕುಟುಂಬಗಳಿಗೆ ಅಪಾಯ



(ನ್ಯೂಸ್‌ ಕಡಬ) newskadaba.com,  ಆ .05 ಮಂಗಳೂರು: ತಾಲೂಕಿನ ಗುರುಪುರ ಸಮೀಪದ ಅನೆಬಾಲಿಯಲ್ಲಿ ನಿರಂತರ ಮಳೆ ಹಾಗೂ ಅನಧಿಕೃತ ಗುಡ್ಡ ಕಟಾವಿನ ಪರಿಣಾಮ ಭಾರೀ ಭೂಕುಸಿತ ಸಂಭವಿಸಿದ್ದು, ಮೂರು ಕುಟುಂಬಗಳು ತೀವ್ರ ಅಪಾಯ ಎದುರಿಸುತ್ತಿವೆ.ಖಾಸಗಿ ಜಮೀನಿನ ಮಾಲೀಕ ಅವ್ವಾದ್ ಎಂಬುವವರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಜೆಸಿಬಿ ಯಂತ್ರಗಳ ಮೂಲಕ ಬೆಟ್ಟ ಅಗೆದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.







ಇದರಿಂದಾಗಿ ಇಳಿಜಾರು ದುರ್ಬಲಗೊಂಡು, ಸ್ಥಳೀಯ ನಿವಾಸಿ ಅಜ್ಮಲ್ ಅವರ ಮನೆಯ ಹಿಂಭಾಗ ಸಂಪೂರ್ಣವಾಗಿ ಕುಸಿದಿದೆ. ಅಪಾಯದ ಹಿನ್ನೆಲೆಯಲ್ಲಿ ಅಜ್ಮಲ್ ಅವರ ಕುಟುಂಬವನ್ನು ದಾನಿಯೊಬ್ಬರ ನೆರವಿನಿಂದ ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದ್ದು, ಸಮೀಪದ ಇಬ್ರಾಹಿಂ ಹಾಗೂ ಉಸ್ಮಾನ್ ಅವರ ಮನೆಗಳಿಗೂ ಮಣ್ಣು ಜಾರುವ ಭೀತಿ ಎದುರಾಗಿದೆ.






ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ತಾರ್ಪಾಲಿನ್ ನೀಡುವ ಭರವಸೆ ನೀಡಿದ್ದರಾದರೂ, ಅನುದಾನ ಹಾಗೂ ನಿಯಮಗಳ ಅಭಾವದ ನೆಪವೊಡ್ಡಿ ಯಾವುದೇ ಪರಿಹಾರ ಒದಗಿಸಿಲ್ಲ. ಅಲ್ಲದೆ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಕೇವಲ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸುಮಾರು 12 ಲಕ್ಷ ರೂ. ಸಾಲ ಮಾಡಿ ಕಟ್ಟಿದ ಮನೆ ವಾಸಕ್ಕೆ ಅಯೋಗ್ಯವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಬಾಧಿತ ಅಜ್ಮಲ್ ಅಳಲು ತೋಡಿಕೊಂಡಿದ್ದಾರೆ..ತಾಲೂಕು ಹಾಗೂ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಅನಧಿಕೃತ ಗುಡ್ಡ ಕಟಾವಿನ ವಿರುದ್ಧ ತನಿಖೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

error: Content is protected !!
Scroll to Top