
(ನ್ಯೂಸ್ ಕಡಬ) newskadaba.com, ಸೆ.22 .ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 108 ಆ್ಯಂಬುಲೆನ್ಸ್ ವಾಹನ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡಿದ್ದು, ಸೇವೆಯನ್ನು ಸ್ಥಗಿತಗೊಳಿಸಲು ನೌಕರರು ನಿರ್ಧರಿಸಿದ್ದಾರೆ.
ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನಾಳೆ ರಾತ್ರಿ 8 ಗಂಟೆಯ ನಂತರ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯಿದೆ.ನಾಳೆ ಸಂಜೆಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೇವೆ ಸ್ಥಗಿತಗೊಳಿಸುವುದರ ಜೊತೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿಬ್ಬಂದಿ ನಿರ್ಧರಿಸಿದ್ದಾರೆ.
ಈ ನಿರ್ಧಾರದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಯಲ್ಲಿ ಏರುಪೇರಾಗಿ ‘ಹೆಲ್ತ್ ಎಮರ್ಜೆನ್ಸಿ’ ಸೃಷ್ಟಿಯಾಗುವ ಭೀತಿ ಎದುರಾಗಿದೆ.ಸಾರ್ವಜನಿಕರು ಹಾಗೂ ರೋಗಿಗಳು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ನೌಕರರು ಆಗ್ರಹಿಸಿದ್ದಾರೆ.




