
(ನ್ಯೂಸ್ ಕಡಬ) newskadaba.com, ಅ. 24 . ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮತ್ತು ಈಶಾನ್ಯ ಮಾರುತಗಳ ಪ್ರಭಾವದಿಂದ ತಮಿಳುನಾಡಿನ ಕೊಡೈಕೆನಾಲ್ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಬಟ್ಲಗುಂಡು–ಕೊಡೈಕೆನಾಲ್ ಘಾಟ್ ರಸ್ತೆಯ ಶ್ರೀನಿವಾಸಪುರ ಮತ್ತು ಶೆಂಬಗನೂರು ಜಂಕ್ಷನ್ ಬಳಿ ಬೆಟ್ಟದಿಂದ ಮಣ್ಣು ಹಾಗೂ ಬಂಡೆಗಳು ಉರುಳಿಬಿದ್ದು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ರಸ್ತೆ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.
ಸ್ಥಳಕ್ಕೆ ಧಾವಿಸಿರುವ ಹೆದ್ದಾರಿ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ, ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ಬಳಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಅಪಾಯ ಆವರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರು ಕೊಡೈಕೆನಾಲ್ ಮತ್ತು ತಂದಿಕುಡಿಗೆ ಪ್ರಯಾಣಿಸದಂತೆ ದಿಂಡುಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಮನವಿ ಮಾಡಿದ್ದಾರೆ.




