ಶಂಕಿತ ಉಗ್ರನಿಗೆ ನಕಲಿ ಪಾಸ್‌ಪೋರ್ಟ್ ನೆರವು ಮಂಗಳೂರಿನ ಟ್ರಾವೆಲ್ ಏಜೆಂಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್



(ನ್ಯೂಸ್‌ ಕಡಬ) newskadaba.com,   ಜು.01: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ ಬೇಕಾಗಿದ್ದ ಶಂಕಿತ ಉಗ್ರ ಇಬ್ರಾಹಿಂ ಖಲೀಲ್ ಸೇರಿದಂತೆ ಸುಮಾರು 15 ಜನರಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆಯಲು ನೆರವಾದ ಆರೋಪ ಎದುರಿಸುತ್ತಿರುವ ಟ್ರಾವೆಲ್ ಏಜೆಂಟ್ ಯು.ಎಂ. ಹೈದರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.







ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದ್ದು, “ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ಅಂಗವಿಕಲತೆ ಅಥವಾ ಅನಾರೋಗ್ಯದ ಕಾರಣ ನೀಡಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.






ಹೈದರ್ ಅವರ ಏಜೆನ್ಸಿಯಿಂದ ಸಲ್ಲಿಕೆಯಾಗಿದ್ದ 15 ವಿವಿಧ ಪಾಸ್‌ಪೋರ್ಟ್ ಅರ್ಜಿಗಳಿಗೆ ಒಂದೇ ವಿಳಾಸ ನೀಡಲಾಗಿದ್ದರೂ, ಸೂಕ್ತ ಸ್ಥಳ ಪರಿಶೀಲನೆ ನಡೆಸದೆ ಅನುಮೋದನೆ ನೀಡಿದ್ದ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ್ ಅವರ ಕಾರ್ಯವೈಖರಿಯನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ಬೇಜವಾಬ್ದಾರಿತನ ತೋರಿದ ಕಾನ್‌ಸ್ಟೆಬಲ್ ಲಕ್ಷ್ಮಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ..

error: Content is protected !!
Scroll to Top