
(ನ್ಯೂಸ್ ಕಡಬ) newskadaba.com, ಅ. 03. ಕಾಸರಗೋಡಿನ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ಬೋರ್‌ವೆಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಮನೆಯ ಮೇಲೆ ಮಗುಚಿ ಬಿದ್ದು, ಲಾರಿಯಲ್ಲಿದ್ದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಬೋರ್‌ವೆಲ್ ಕೊರೆತ ಮುಗಿಸಿ ಹಿಂತಿರುಗುತ್ತಿದ್ದ ಲಾರಿ, ಕಡಿದಾದ ಇಳಿಜಾರು ರಸ್ತೆಯಲ್ಲಿ ಸಾಗುವಾಗ ಹಠಾತ್ ಚಾಲಕನ ನಿಯಂತ್ರಣ ತಪ್ಪಿ ಜೇಸನ್ ಎಂಬುವರ ಮನೆಯ ಮೇಲೆ ಬಿದ್ದಿದೆ.ತೀವ್ರ ಗಾಯಗೊಂಡಿದ್ದ ಕಾರ್ಮಿಕರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಅಪಘಾತದಿಂದಾಗಿ ಮನೆಯ ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದಿದ್ದರೂ, ಒಳಗಿದ್ದ ಜೇಸನ್ ಹಾಗೂ ಕುಟುಂಬಸ್ಥರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಲಾರಿಯ ಭಾರೀ ತೂಕದ ಕ್ರೇನ್ ಭಾಗ ತಾರಸಿಯ ಬದಿಗೆ ಸಿಲುಕಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಲಾರಿಯನ್ನು ತೆರವುಗೊಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




