
(ನ್ಯೂಸ್ ಕಡಬ) newskadaba.com, ಅ. 03. ಚಂಡಕಾಪುರ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ 19 ವರ್ಷದ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಭೀಕರ ಘಟನೆ ಸಂಭವಿಸಿದೆ.ಮಂಠಾಳ ಗ್ರಾಮದ ಅಮಿತ್ (19) ಮೃತಪಟ್ಟ ದುರ್ದೈವಿ. ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಅವರಿಗೆ ಸೇರಿದ ಪೆಟ್ರೋಲ್ ಬಂಕ್‌ನಲ್ಲಿ ಈ ದುರಂತ ನಡೆದಿದೆ. ಬಂಕ್ ಕಟ್ಟಡದ ಮೇಲಿದ್ದ ಸೋಲಾರ್ ಪ್ಯಾನೆಲ್ ತೊಳೆಯುತ್ತಿದ್ದ ವೇಳೆ ವಿದ್ಯುತ್ ಹರಿದು ಘಟನೆ ಸಂಭವಿಸಿದೆ ಎನ್ನಲಾಗಿದೆ.
“ಇಂಧನ (ಪೆಟ್ರೋಲ್-ಡೀಸೆಲ್) ತುಂಬಿಸುವ ಕೆಲಸಕ್ಕೆ ಸೇರಿಸಿಕೊಂಡು, ನಿಯಮ ಬಾಹಿರವಾಗಿ ಅಪಾಯಕಾರಿ ರೀತಿಯಲ್ಲಿ ಸೋಲಾರ್ ಕ್ಲೀನ್ ಮಾಡಲು ಹಚ್ಚಿದ್ದಾರೆ” ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತದಲ್ಲಿ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಬಂಕ್ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.
ಘಟನೆ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




