(ನ್ಯೂಸ್ ಕಡಬ) newskadaba.com, ಮೇ.21: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜನರಿಗೆ ಹಾಲಿನ ದರ ಏರಿಕೆಯ ಶಾಕ್ ಎದುರಾಗಿದೆ. ರಾಜ್ಯದ ಜನಪ್ರಿಯ ಹಾಲು ಬ್ರಾಂಡ್ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ ‘ಮಿಲ್ಮಾ’ ಹಾಲಿನ ದರವನ್ನು ಲೀಟರ್‌ಗೆ ರೂ. 4 ಹೆಚ್ಚಳ ಮಾಡಲಾಗಿದೆ.
ಜೂನ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಈ ಕ್ರಮ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, “ನಾವು ಹೊಸದಾಗಿ ದರ ಏರಿಕೆ ಮಾಡಿಲ್ಲ. ಹಿಂದಿನ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಈಗ ಜಾರಿಗೆ ತಂದಿದ್ದೇವೆ,” ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ನೀಡಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ದಶಕದ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. ನೂತನ ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಒಟ್ಟು 20 ಸಚಿವರಿದ್ದು, ಇವರಲ್ಲಿ 14 ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಹೊಸ ಸರ್ಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಲವು ಜನಪರ ಘೋಷಣೆಗಳನ್ನು ಮಾಡಿದೆ. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮೋದನೆ ನೀಡಲಾಗಿದ್ದು, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಇದೇ ಸಮಯದಲ್ಲಿ ಹಾಲಿನ ದರ ಏರಿಕೆ ಜಾರಿಗೆ ಬಂದಿರುವುದು ಸರ್ಕಾರಕ್ಕೆ ಆರಂಭದಲ್ಲೇ ಟೀಕೆಗಳನ್ನು ಎದುರಿಸುವಂತಾಗಿದೆ










