(ನ್ಯೂಸ್ ಕಡಬ) newskadaba.com, ಮೇ.21: ಸಾಮಾಜಿಕ ಮಾಧ್ಯಮದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎಲ್ಲರ ಗಮನ ಸೆಳೆಯುತ್ತಿದೆ. ಇದು ನಿಜವಾದ ರಾಜಕೀಯ ಪಕ್ಷವಲ್ಲ, ಬದಲಾಗಿ ಆನ್‌ಲೈನ್‌ನಲ್ಲಿ ಹುಟ್ಟಿಕೊಂಡ ವಿಡಂಬನಾತ್ಮಕ ಅಭಿಯಾನವಾಗಿದೆ.
‘ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಕಾಕ್ರೋಚ್ ಜನತಾ ಪಾರ್ಟಿಯು, ‘ವ್ಯವಸ್ಥೆಯು ಲೆಕ್ಕ ಹಾಕಲು ಮರೆತುಹೋದ ಜನರನ್ನು ನಾವು ಪ್ರತಿನಿಧಿಸುತ್ತೇವೆ’ ಎಂದಿದೆ. ಇದು ಜೆನ್ ಝೀ ಯುವಕರ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಪ್ರತಿಭಟನೆಯಾಗಿ ಮಾರ್ಪಡುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಈ ಖಾತೆ ಕಾರ್ಯನಿರ್ವಹಿಸುತ್ತಿದೆ. ಈ ಖಾತೆ ಕೇವಲ 4 ದಿನಗಳಲ್ಲಿ 9.8 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ.
ಈ ವಿಡಂಬನಾತ್ಮಕ ಪಕ್ಷವನ್ನು ಆಮ್ ಆದ್ಮಿ ಪಕ್ಷದ ಮಾಜಿ ಸೋಷಿಯಲ್ ಮೀಡಿಯಾ ಕಾರ್ಯಕರ್ತ ಅಭಿಜೀತ್ ದಿಪ್ಕೆ ಆರಂಭಿಸಿದ್ದಾರೆ. ಇದಕ್ಕೆ, ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಕೂಡ ಬೆಂಬಲ ನೀಡಿದ್ದಾರೆ.
ಸಿಜೆಪಿ ಐದು ಅಂಶಗಳ ಪ್ರಣಾಳಿಕೆಯನ್ನು ಹೊಂದಿದ್ದು, ಅವುಗಳು ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳನ್ನು ವಿಮರ್ಷಿಸುತ್ತವೆ. ಪ್ರಣಾಳಿಕೆಯಲ್ಲಿ:
*ಎಲ್ಲ ಕ್ಯಾಬಿನೆಟ್ ಸ್ಥಾನಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲಾಗುತ್ತದೆ
*ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಮತ್ತು ಸಂಸದರ ಮೇಲೆ 20 ವರ್ಷಗಳ ನಿಷೇಧ ಹೇರಲಾಗುತ್ತದೆ
*’ಗೋದಿ ಮೀಡಿಯಾ’ ಆಂಕರ್‌ಗಳ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
*ಯಾವುದೇ ಮಾನ್ಯವಾದ ಮತವನ್ನು ಡಿಲೀಟ್ ಮಾಡಿದರೆ ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಯುಎಪಿಎ ಕಾಯ್ದೆಯಡಿ ಬಂಧಿಸಲಾಗುತ್ತದೆ.
*ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ರಾಜ್ಯಸಭೆಗೆ ನೇಮಕ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುತ್ತದೆ.
ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಪರಾವಲಂಬಿಗಳಾಗುತ್ತಿದ್ದಾರೆ. ಅವರಲ್ಲಿ ಸೋಷಿಯಲ್ ಮೀಡಿಯಾ ಬಳಕೆದಾರರು, ಆರ್‌ಟಿಐ ಕಾರ್ಯಕರ್ತರು ಇರುತ್ತಾರೆ. ಈ ವ್ಯವಸ್ಥೆ ಮೇಲೆ ದಾಳಿ ಮಾಡುತ್ತಾರೆ ಎಂದು ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ಸಿಜೆಐ ಸೂರ್ಯ ಕಾಂತ್ ಅವರು ತಿಳಿಸಿದ್ದರು.
ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಿಜೆಐ, ಭಾರತೀಯ ಯುವಕರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು.
ಆನ್‌ಲೈನ್‌ನಲ್ಲಿ ಹವಾ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ: ಸುಪ್ರೀಂ ಸಿಜೆಐ ಹೇಳಿಕೆಗೆ ಟಕ್ಕರ್ ನೀಡಿದ ಜೆನ್ ಝೀ









