ಉಡುಪಿ: ವಾಣಿಜ್ಯ ಮಳಿಗೆಯಲ್ಲಿ ಅಗ್ನಿ ಅವಘಡ; ಅಂದಾಜು 2.5 ಕೋಟಿ ರೂ. ನಷ್ಟ

(ನ್ಯೂಸ್‌ ಕಡಬ) newskadaba.com,  ಎ.28 ನಗರದ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ವಾಣಿಜ್ಯ ಮಳಿಗೆಯೊಂದರಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ​

ಮೂಲತಃ ರಾಜಸ್ಥಾನದವರಾದ ಉದ್ಯಮಿ ಭೀಮಾ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ವಸ್ತುಗಳ ಗೋದಾಮಿನಲ್ಲಿ ಭಾನುವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬೆಂಕಿ ಅವಘಡದಲ್ಲಿ ಅವರಿಗೆ ಸೇರಿದ ಪ್ಲಾಸ್ಟಿಕ್ ಮಳಿಗೆ ಮತ್ತು ಮೊಬೈಲ್ ಮಳಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಲ್ಲದೆ, ಪಕ್ಕದ ಎರಡು-ಮೂರು ಅಂಗಡಿಗಳಿಗೂ ಹಾನಿಯಾಗಿದ್ದು, ಭಾರಿ ನಷ್ಟ ಸಂಭವಿಸಿದೆ.

ಭಾನುವಾರ ಸಂಜೆ ಆರಂಭವಾದ ಅಗ್ನಿಶಾಮಕ ದಳದ ಕಾರ್ಯಾಚರಣೆಯು ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಮುಂದುವರೆದಿದೆ. ತಡರಾತ್ರಿ ಬೆಂಕಿಯನ್ನು ಹತೋಟಿಗೆ ತಂದಿದ್ದರೂ, ಗೋದಾಮು ಮತ್ತು ಕೆಳಗಿನ ಅಂಗಡಿಗಳಲ್ಲಿ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ದುರಂತದಲ್ಲಿ ಒಂದೇ ಮಾಲೀಕರಿಗೆ ಸೇರಿದ ನಾಲ್ಕು ಮಳಿಗೆಗಳು ಸಂಪೂರ್ಣ ಭಸ್ಮವಾಗಿವೆ. ಈ ಆಘಾತದಿಂದಾಗಿ ಅಂಗಡಿ ಮಾಲೀಕ ಭೀಮಾ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೇವಲ ಸರಕು ಸಾಮಗ್ರಿಗಳು ಮಾತ್ರವಲ್ಲದೆ, ಬೆಂಕಿಯ ತೀವ್ರತೆಗೆ ಕಟ್ಟಡ ಮತ್ತು ಅದರ ಶಟರ್‌ಗಳಿಗೂ ತೀವ್ರ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Scroll to Top