ಮೂಡುಬಿದಿರೆ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್‌ ಕಡಬ) newskadaba.com,  .20:  ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಕೆ. ಅಬ್ದುಲ್ ಬಶೀರ್ ಅಲಿಯಾಸ್ ಅರ್ಗ ಬಶೀರ್ (50) ಎಂದು ಗುರುತಿಸಲಾಗಿದೆ.

ಆರೋಪಿಯ ವಿರುದ್ಧ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಸುಮಾರು ನಾಲ್ಕು ವರ್ಷಗಳಿಂದ ಈತ ನ್ಯಾಯಾಲಯದ ಕಲಾಪಗಳಿಗೆ ಗೈರಾಗಿದ್ದರಿಂದ, ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು.

 

ಆರೋಪಿಯು ತೆಂಕಮಿಜಾರು ಗ್ರಾಮದ ಅರ್ಗ ಎಂಬಲ್ಲಿದ್ದ ತನ್ನ ಮನೆಯನ್ನು ಕುಟುಂಬದೊಂದಿಗೆ ತೊರೆದು, ಬಿ.ಸಿ. ರೋಡ್ ಸಮೀಪದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಏಪ್ರಿಲ್ 18 ರಂದು ಆತನನ್ನು ವಶಕ್ಕೆ ಪಡೆದಿದ್ದಾರೆ.

 

ಆರೋಪಿ ಅಬ್ದುಲ್ ಬಶೀರ್ ಮೇಲೆ ಒಟ್ಟು 17ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಕ್ಕೆ ಚಳ್ಳೆಹಣ್ಣು ತಿನ್ನಿಸಿ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈ ಕುಖ್ಯಾತ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

Scroll to Top