ಆಪರೇಷನ್ ಅರಹಮಾ: ಓರ್ವ ಪಾಕ್ ಮೂಲದ ಉಗ್ರ ಎನ್‌ಕೌಂಟರ್



(ನ್ಯೂಸ್‌ ಕಡಬ) newskadaba.com,ಎ.01 : ಜಮ್ಮು ಮತ್ತು ಕಾಶ್ಮೀರದ ಗಂಡೇಬಲ್ ಜಿಲ್ಲೆಯಲ್ಲಿ ‘ಆಪರೇಷನ್ ಅರಹಮಾ’ ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಿಡೀ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಓರ್ವ ಪಾಕಿಸ್ತಾನಿ ಮೂಲದ ಉಗ್ರ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.







ಗಂಡೇಬಲ್ ಜಿಲ್ಲೆಯ ಅರಹಮಾ ಪ್ರದೇಶದಲ್ಲಿ ‘ಆಪರೇಷನ್ ಅರಹಮಾ’ ಕಾರ್ಯಾಚರಣೆಯನ್ನ ನಡೆಸಲಾಗುತ್ತಿದ್ದು, ಉಗ್ರರಿಗಾಗಿ ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಜೊತೆಗೆ ಭಾರತೀಯ ಸೇನೆಯ ಎರಡು ಅಸ್ಸಾಂ ರೆಜಿಮೆಂಟ್‌ಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.






ಮಾರ್ಚ್ 31 ರ ರಾತ್ರಿ ಉಗ್ರರ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಲು ಶುರು ಮಾಡಿದವು. ಬಳಿಕ ಸೇನೆಯಿಂದಲೂ ಪ್ರತಿದಾಳಿ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದು, ಇಬ್ಬರು ಅಥವಾ ಮೂವರು ಉಗ್ರರನ್ನ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯೊಂದಿಗೆ ಮಾ.31 ರ ರಾತ್ರಿ ಗಂಡರ್‌ಬಾಲ್‌ನ ಅರಹಮ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಅನುಮಾನಾಸ್ಪದ ಚಲನವಲನಗಳನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಶಂಕಿತರನ್ನ ಪ್ರಶ್ನೆ ಮಾಡಿದ್ರು. ಪ್ರಶ್ನೆ ಮಾಡುತ್ತಿದ್ದಂತೆ ಶಂಕಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇತ್ತ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತತ 2ನೇ ದಿನವೂ ಜಂಟಿ ಕಾರ್ಯಾಚರಣೆ ಮುಂದುವರಿದಿದ್ದು, ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿರುವ ಶಂಕೆಯಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

error: Content is protected !!
Scroll to Top