ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್ನಿಂದ ಉದ್ಯಮಿ ಹತ್ಯೆ; ಗಾಯಕನ ಮನೆ ಮೇಲೆ ಗುಂಡಿನ ದಾಳಿ

(ನ್ಯೂಸ್‌ ಕಡಬ) newskadaba.com,  ಅ..29: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ದಾಳಿ ನಡೆಸಿದ್ದು, ಭಾರತೀಯ ಮೂಲದ ಅಬಾಟ್ಸ್‌ಫೋರ್ಡ್ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಅವರನ್ನು ಹತ್ಯೆ ಮಾಡಿದೆ. ಜೊತೆಗೆ ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಜಸ್ಥಾನದ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ಅಮೆರಿಕದಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಎರಡು ದಾಳಿಗಳು ನಡೆದಿವೆ. ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಧಿಲ್ಲೋನ್, ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಸಿ ಅವರ ಹತ್ಯೆಯ ಹಿಂದೆ ಈ ಗುಂಪಿನ ಕೈವಾಡವಿದೆ ಎಂದು ತಿಳಿಸಿದ್ದಾರೆ.

ದರ್ಶನ್ ಸಿಂಗ್ ದೊಡ್ಡ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದರು. ಈ ಗ್ಯಾಂಗ್ ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹಣ ಸಿಗದ ಕಾರಣ, ಗ್ಯಾಂಗ್ ಅವರನ್ನು ಹತ್ಯೆ ಮಾಡಿದೆ ಎಂದು ಹೇಳಲಾಗಿದೆ.

ಸೋಮವಾರ ಬೆಳಗ್ಗೆ ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ಫೋರ್ಡ್‌ನಲ್ಲಿರುವ ಅವರ ಮನೆಯ ಹೊರಗೆ ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅವರು ಮನೆಯ ಹೊರಗೆ ಬರುವುದನ್ನೇ ಕಾದು ಕುಳಿತಿದ್ದ ಗ್ಯಾಂಗ್ ಗುಂಡಿಕ್ಕಿ ಕೊಂದಿದೆ.

ಪೊಲೀಸರು ಸ್ಥಳಕ್ಕೆ ಬಂದಾಗ ಉದ್ಯಮಿ ಗಂಭೀರ ಸ್ಥಿತಿಯಲ್ಲಿದ್ದರು. ದರ್ಶನ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರನ್ನು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Scroll to Top