(ನ್ಯೂಸ್ ಕಡಬ) newskadaba.com, ಸೆ.17 ನವದೆಹಲಿ : ಮೇಘಾ ಇಂಜಿನಿಯರಿಂಗ್ ಕಂಪನಿಯು ಉಡುಪಿಯ ಪಾದೂರಿನಲ್ಲಿ ಭೂಗತ ತೈಲ ಸಂಗ್ರಹಣಾ ಘಟಕವನ್ನು ನಿರ್ಮಿಸಲಿದೆ. ಮೇಘಾ ಇಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಬಿಡ್ ಗೆದ್ದುಕೊಂಡಿದೆ. ಐಎಸ್‌ಪಿಆರ್‌ಎಲ್ ಬಿಡ್ ಅನ್ನು ಖಾಸಗಿ ಕಂಪನಿ ಮೊದಲ ಬಾರಿಗೆ ಗೆದ್ದುಕೊಂಡಿದ್ದು ಸುಮಾರು 5,700 ಕೋಟಿ ರೂ ವೆಚ್ಚದಲ್ಲಿ 2.5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯವಿರುವ ತೈಲ ಸಂಗ್ರಹಣಾ ಘಟಕ ನಿರ್ಮಿಸಲಾಗುವುದು.
ತೈಲ ಸಂಗ್ರಹಣಾ ಘಟಕವನ್ನು ನಿರ್ಮಿಸಲು ಪಾದೂರಿನಲ್ಲಿ 214 ಎಕರೆ ಭೂಮಿಯನ್ನು ಐಎಸ್‌ಪಿಆರ್‌ಎಲ್ ಮೇಘಾ ಇಂಜಿನಿಯರಿಂಗ್ ಕಂಪನಿಗೆ ಉಚಿತವಾಗಿ ಹಸ್ತಾಂತರಿಸಲಿದೆ. ಈಗಾಗಲೇ ಐಎಸ್‌ಪಿಆರ್‌ಎಲ್ ಪಾದೂರಿನಲ್ಲಿ ತೈಲ ಸಂಗ್ರಹಣಾ ಘಟಕವನ್ನು ಸ್ಥಾಪಿಸಿದೆ. ಒಪ್ಪಂದದ ಪ್ರಕಾರ, ಮೇಘಾ ಕಂಪನಿಯು ಸರ್ಕಾರ ಅಥವಾ ತೈಲ ಕಂಪನಿಗಳಿಗೆ ಶೇಖರಣಾ ಸ್ಥಳವನ್ನು ಗುತ್ತಿಗೆ ನೀಡುವ ಮೂಲಕ ಆದಾಯ ಸಂಗ್ರಹಿಸಬಹುದಾಗಿದೆ. ಆದರೆ ತುರ್ತು ಸಂದರ್ಭಗಳಲ್ಲಿ ಸಂಗ್ರಹಿಸಿದ ತೈಲದ ಮೇಲೆ ಸರ್ಕಾರವು ಮೊದಲ ಹಕ್ಕನ್ನು ಹೊಂದಿರಲಿದೆ. ಈ ಗುತ್ತಿಗೆಯ ಪ್ರಕಾರ ಮೇಘಾ ಇಂಜಿನಿಯರಿಂಗ್ ಕಂಪನಿ 5 ವರ್ಷದ ಒಳಗಡೆ ಘಟಕ ನಿರ್ಮಿಸಬೇಕು. ಜೊತೆಗೆ 60 ವರ್ಷಗಳ ವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ.
ಭಾರತದಲ್ಲಿ ಎಲ್ಲೆಲ್ಲಿ ತೈಲ ಸಂಗ್ರಗಣಾ ಘಟಕಗಳಿವೆ?
ಐಎಸ್‌ಪಿಆರ್‌ಎಲ್ ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹ ಮಾಡಬಹುದಾಗಿದೆ.
ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿತ್ತು. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಮಾಹಿತಿ ನೀಡಿತ್ತು.










