(ನ್ಯೂಸ್ ಕಡಬ) newskadaba.com, ಸೆ.04 ದೆಹಲಿ: ಕಳೆದ ಕೆಲ ದಿನಗಳಿಂದ ಉತ್ತರ, ಪೂರ್ವ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಳೆ ಬುಧವಾರವೂ ತನ್ನ ಪ್ರತಾಪ ಮುಂದುವರೆದಿದೆ. ಒಟ್ಟು 10 ರಾಜ್ಯಗಳಲ್ಲಿ ಮಳೆ ಅಬ್ಬರ ತೋರಿಸಿದ್ದು ಒಂದೇ ದಿನ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ, ಪ್ರವಾಹದಂಥ ಘಟನೆಗಳು ಸಂಭವಿಸಿದ್ದು, ರೈಲು, ವಿಮಾನ, ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಹಲವು ರಾಜ್ಯಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿಯಲ್ಲಿ ಬುಧವಾರವೂ ಮಳೆ ಮುಂದುವರೆದಿದ್ದು ಹಳೆ ರೈಲ್ವೆ ಸೇತುವೆ ಪ್ರದೇಶದಲ್ಲಿ ಯಮುನಾ ನದಿಯ ನೀರಿನ ಮಟ್ಟ 207 ಮೀಟರ್ ದಾಟಿದೆ. ಯಮುನಾ ನದಿ ಈ ಮಟ್ಟ ತಲುಪಿರುವುದು ಕಳೆದ 63 ವರ್ಷಗಳಲ್ಲಿ ಇದು ಮೂರನೇ ಬಾರಿ. ಭಾರೀ ಮಳೆಯ ಪ್ರಮಾಣ ಹಲವು ಸ್ಮಶಾನಗಳಿಗೂ ನೀರು ನುಗ್ಗಿದ್ದು ಅಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ತಗ್ಗುಪ್ರದೇಶಗಳಲ್ಲಿ ಇನ್ನೂ 7500 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಮಾಲಿನ್ಯ ಇಳಿಕೆ: ಕಳೆದ ಕೆಲ ದಿನಗಳ ಭಾರೀ ಮಳೆ ಇಳಿಕೆ ಪರಿಣಾಮ ನವದೆಹಲಿಯ ಹಲವು ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 52ಕ್ಕೆ ಇಳಿದಿತ್ತು. ಇದು ತೃಪ್ತಿದಾಯಕ ಮಟ್ಟವಾಗಿದೆ.










