(ನ್ಯೂಸ್ ಕಡಬ) newskadaba.com, ಆಗಸ್ಟ್ 29ಮುಂಬಯಿ: ಭಾರತದ ಮಾಜಿ ಆಲ್‌ರೌಂಡರ್ ಬಿನ್ನಿ ಭಾರತದ ಪರ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳಾಡಿದ್ದು, ಒಟ್ಟು 124 ವಿಕೆಟ್ ಪಡೆದಿದ್ದರು. 1983ರ ಐತಿಹಾಸಿಕ ವಿಶ್ವಕಪ್ ಗೆಲುವಿನಲ್ಲಿ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದ ಬಿನ್ನಿ ಎಂಟು ಇನ್ನಿಂಗ್ಸ್ ಗಳಲ್ಲಿ 18 ವಿಕೆಟ್ ಪಡೆದಿದ್ದರು.
2022ರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿರುವ ಕರ್ನಾಟಕದ ರೋಜರ್ ಬಿನ್ನಿ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಬಿಸಿಸಿಐ ಚುನಾವಣೆಯವರೆಗೆ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಹಂಗಾಮಿಯಾಗಿ ನೇಮಕಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಿಸಿಸಿಐ ಸಂವಿಧಾನದ ಪ್ರಕಾರ 70 ವರ್ಷದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಇರುವಂತಿಲ್ಲ. ಬಿನ್ನಿಗೆ ಇದೇ ಜುಲೈ 19ರಂದು 70 ವರ್ಷ ತುಂಬಿತ್ತು.
ರಾಜೀವ್ ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಅಂದು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2017ರವರೆಗೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2018ರವರೆಗೆ ಐಪಿಎಲ್ ಅಧ್ಯಕ್ಷರಾಗಿ ಶುಕ್ಲಾ ಕೆಲಸ ಮಾಡಿದ್ದರು. ಹಲವು ಅನುಭವ ಆಧಾರದಲ್ಲಿ ಅವರಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.








