(ನ್ಯೂಸ್ ಕಡಬ) newskadaba.com,ಆ.23 ಬೆಂಗಳೂರು: ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು ಕುರಿತು ಶ್ವೇತಪತ್ರ ಮಂಡಿಸಲು ರಾಜ್ಯಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ನಿಯಮ 69ರ ಅಡಿ ಕಾಂಗ್ರೆಸ್ನ ಸದಸ್ಯರಾದ ಕೆ.ಎಂ. ಶಿವಲಿಂಗೇಗೌಡ, ಎನ್.ಎಚ್.ಕೋನರೆಡ್ಡಿ, ಶರತ್ ಬಚ್ಚೇಗೌಡ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದರು.
ಇದಕ್ಕೆ ಶುಕ್ರವಾರ ಸದನದಲ್ಲಿ ಉತ್ತರಿಸಿದ ಸಿಎಂ, ಕೇಂದ್ರದ ಅನುದಾನ, ತೆರಿಗೆ ಪಾಲು ಬಗ್ಗೆ ಶ್ವೇತ ಪತ್ರ ಹೊರಡಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕೆಲ ವರ್ಷಗಳ ಹಿಂದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಶೇ.75 ಮತ್ತು ರಾಜ್ಯ ಶೇ.25ರಷ್ಟು ಅನುಪಾತದಲ್ಲಿ ಅನುದಾನ ನೀಡಲಾಗುತ್ತಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ಆ ಪ್ರಮಾಣವನ್ನು ಶೇ.40ಕ್ಕೆ ಇಳಿಸಲಾಗಿದೆ. ಇದರರ್ಥ ಕೇಂದ್ರವು ತನ್ನ ಪಾಲನ್ನು ಶೇ. 60 ರಷ್ಟು ಕಡಿತಗೊಳಿಸಿದೆ ಎಂದು ತಿಳಿಸಿದರು. ಈ ವೇಳೆ ಈ ಸಂಬಂಧ ಶ್ವೇತ್ರ ಪತ್ರ ಹೊರಡಿಸುವಂತೆ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಶ್ವೇತ ಪತ್ರ ಹೊರಡಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಶೀಘ್ರದಲ್ಲೇ ಮಂಡಿಸುತ್ತೇವೆಂದು ಎಂದು ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ನೀವು ಶ್ವೇತಪತ್ರವನ್ನಾದರೂ ಹೊರಡಿಸಿ ಬ್ಲ್ಯಾಕ್, ಯೆಲ್ಲೋ, ಬ್ಲೂé ಪೇಪರ್ನ್ನಾದರೂ ಪ್ರಕಟಿಸಿ. ಆದರೆ ಕೇಂದ್ರ ಸರಕಾರ ರೈಲ್ವೆ, ಹೆದ್ದಾರಿ ಸಹಿತ ಎಲ್ಲ ಯೋಜನೆಗಳನ್ನೂ ಅದರಲ್ಲಿ ಸೇರಿಸಿ. ಇಲ್ಲವಾದರೆ ನಾವು ಇನ್ನೊಂದು ಶ್ವೇತಪತ್ರ ಹೊರಡಿಸಬೇಕಾಗುತ್ತದೆ ಎಂದು ತಿಳಿಸಿದರು.









