(ನ್ಯೂಸ್ ಕಡಬ) newskadaba.com ಆ.20 ನವದೆಹಲಿ: ‘ಪಾಕಿಸ್ತಾನದೊಂದಿಗಿನ ಬಾಂಧವ್ಯ ಸಹಜ ಸ್ಥಿತಿಗೆ ತರುವ ವಿಚಾರದಲ್ಲಿ ಭಾರತಕ್ಕೆ ಇನ್ನೊಂದು ಹೆಜ್ಜೆ ಮುಂದಿಡುವ ಹಂಬಲವಿಲ್ಲ. ಇದಕ್ಕಾಗಿ ತನ್ನ ನೆಲದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಮಟ್ಟ ಹಾಕುವ ಮೂಲಕ ಪ್ರಾಮಾಣಿಕತೆ ತೋರಿಸುವತ್ತ ಮೊದಲ ಹೆಜ್ಜೆ ಇಡಬೇಕು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ನಡವಳಿಕೆಯನ್ನು ಗಮನಿಸಿದಾಗ, ಹೊಣೆಗಾರಿಕೆ ಅವರ ಮೇಲಿದೆ. ಪಾಕಿಸ್ತಾನವೇ ತನ್ನ ನೆಲದಲ್ಲಿರುವ ಭಯೋತ್ಪಾದಕ ಜಾಲವನ್ನು ನಿರ್ನಾಮ ಮಾಡುವ ಮೂಲಕ ಹೊಣೆಗಾರಿಕೆ ಪ್ರದರ್ಶಿಸಬೇಕು.
1950ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಲಿಯಾಕತ್ ಅಲಿ ಖಾನ್ ನಡುವಣ ಒಪ್ಪಂದದಿಂದ ಹಿಡಿದು 1999ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಲಾಹೋರ್‌ಗೆ ಬಸ್ ಪ್ರಯಾಣ ಮತ್ತು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲಾಹೋರ್ ಭೇಟಿಯವರೆಗೂ ಪ್ರತಿ ಬಾರಿಯೂ ಭಾರತದ ಪ್ರಯತ್ನಗಳಿಗೆ ಪಾಕಿಸ್ತಾನ ದ್ರೋಹ ಬಗೆದಿತ್ತು’ ಎಂದು ಹೇಳಿದರು









