(ನ್ಯೂಸ್ ಕಡಬ) newskadaba.com ಜೂ. 19. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಅತಂತ್ರ ಸ್ಥಿತಿಯಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಆಪರೇಷನ್ ಸಿಂಧು ಕಾರ್ಯಾಚರಣೆಯ ಮೊದಲ ಭಾಗವಾಗಿ, ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 110 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಗುರುವಾರ ಮುಂಜಾನೆ ಅರ್ಮೇನಿಯಾದ ಯೆರೆವಾನ್ ನಿಂದ ದೆಹಲಿಗೆ ಕರೆ ತರಲಾಯಿತು.
ಭಾರತೀಯ ರಾಜತಾಂತ್ರಿಕ ಕಚೇರಿಯ ಸಂಘಟಿತ ಪ್ರಯತ್ನದ ಫಲವಾಗಿ ಟೆಹರಾನ್ ನಲ್ಲಿ ವಾಸವಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಆಪರೇಷನ್ ಸಿಂಧು ಆರಂಭವಾಗಿದೆ. ಇರಾನ್ ನಿಂದ ಭಾರತೀಯರನ್ನು ಹೊರತರುವ ಕಾರ್ಯಾಚರಣೆಗೆ ಭಾರತ ಚಾಲನೆ ನೀಡಿದೆ. ಇದುವರೆಗೆ 110 ವಿದ್ಯಾರ್ಥಿಗಳನ್ನು ಉತ್ತರ ಇರಾನ್ ನಿಂದ ಕರೆತರಲಾಗಿದ್ದು, ಇವರು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲ್ವಿಚಾರಣೆಯಲ್ಲಿ ಅರ್ಮೇನಿಯಾ ತಲುಪಿದ್ದಾರೆ” ಎಂದು ಎಂಇಎ ವಕ್ತಾರ ರಾಜೇಂದ್ರ ಜೈಸ್ವಾಲ್ ಟ್ವೀಟ್ ಮಾಡಿದ್ದರು.










