(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ- 3, ಇಂದು ಚಂದ್ರನ ಅಂಗಳದಲ್ಲಿ ಇಳಿಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ಕೊನೆಯ ಆ. 20 ನಿಮಿಷಗಳು ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತದೆ ಎಂದೇ ಹೇಳಬಹುದು. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದಾರೆ. 2019ರ ಸೆಪ್ಟೆಂಬರ್ 6ರಂದು ಕೊನೇ ಕ್ಷಣದಲ್ಲಿ ಉಂಟಾದ ಆಘಾತ, ನೋವು ಮತ್ತೆ ಎದುರಾಗದಿರಲಿ ಅನ್ನೋದೇ ಕೋಟ್ಯಂತರ ಜನರ ಪ್ರಾರ್ಥನೆ.
ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ. ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆಯ ಇಷ್ಟು ದಿನದ ಪಯಣದಂತೆಯೇ ಕೊನೆಯ 20 ನಿಮಿಷಗಳ ಯಾನ ಅತ್ಯಂತ ನಿರ್ಣಾಯಕ. ಚಂದ್ರಯಾನದ ಒಂದೊಂದೇ ಪ್ರಕ್ರಿಯೆಗಳನ್ನು ಇಸ್ರೋ ಸಂಸ್ಥೆಯು ಹಂತ ಹಂತವಾಗಿ ಮತ್ತು ಸೂಕ್ಷ್ಮವಾಗಿ ನೆರವೇರಿಸುತ್ತಾ ಬಂದಿದೆ. ಇದರಲ್ಲಿ ಕ್ಲಿಷ್ಟಕರ ಕಾರ್ಯವೆಂದರೆ ಆಗಸ್ಟ್ 17ರಂದು ನಡೆದ ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಪ್ರತ್ಯೇಕಿಸುವುದು. ಕಕ್ಷೆಯಲ್ಲಿ ಚಂದ್ರನಿಂದ 153163 ಕಿ.ಮೀ ದೂರದಲ್ಲಿ ಇರುವಾಗ ಡಿಬೂಸ್ಟಿಂಗ್ ಮಾಡುವ ಕಾರ್ಯ ಯಶಸ್ವಿಯಾಗಿತ್ತು. ನಿಯಂತ್ರಿತ ಅವರೋಹಣ ಕಾರ್ಯ ಆರಂಭಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್ ಅನ್ನು 13425 ಕಿಮೀ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿ ಇಳಿಸಲಾಗಿತ್ತು. ಈವರೆಗೂ ಚಂದ್ರಯಾನ-3ರ ಎಲ್ಲಾ ಪ್ರಕ್ರಿಯೆಗಳೂ ಅಡೆತಡೆಯಿಲ್ಲದೆ ಸಫಲವಾಗಿ ನಡೆದಿದೆ.