ದಿಲ್ಲಿ ಮೆಟ್ರೋ ನಿಲ್ದಾಣದಲ್ಲಿ ‘ಗೋಲಿ ಮಾರೋ’ ಘೋಷಣೆ ಕೂಗಿದ ದುಷ್ಕರ್ಮಿಗಳು: 6 ಮಂದಿ ಪೊಲೀಸ್ ವಶಕ್ಕೆ

ಹೊಸದಿಲ್ಲಿ, ಫೆ.29: ರಾಜಧಾನಿ ದಿಲ್ಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಿಳಿ ಟಿ-ಶರ್ಟ್ ಹಾಗೂ ಕೇಸರಿ ರುಮಾಲುಗಳನ್ನು ಧರಿಸಿದ್ದ ಗುಂಪೊಂದು ‘ದೇಶ್ ಕಿ ಗದ್ದಾರೋಂ ಕೊ, ಗೋಲಿ ಮಾರೋ ಸಾ…ಕೋ” ಎಂಬ ಘೋಷಣೆಗಳನ್ನು ಕೂಗುತ್ತಾ ಅರೆಕ್ಷಣ ಅಲ್ಲಿದ್ದ ಜನರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ.

ಈಶಾನ್ಯ ದಿಲ್ಲಿಯ ಹಿಂಸಾಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿರುವಂತಹ ಸಂದರ್ಭದಲ್ಲಿ ಕೇಳಿ ಬಂದ ಈ ಘೋಷಣೆ ಸಾಕಷ್ಟು ಆತಂಕಕ್ಕೆಡೆ ಮಾಡಿಕೊಟ್ಟಿದೆ. ಈ ಘಟನೆ ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿ  ವೀಡಿಯೋ ವೈರಲ್ ಆಗಿದೆ.

ಈ ಘೋಷಣೆ ಕೂಗುತ್ತಿರುವವರನ್ನು ತಕ್ಷಣ ಸೆರೆ ಹಿಡಿದ ಮೆಟ್ರೋ ಸಿಬ್ಬಂದಿ ಹಾಗೂ ಸುರಕ್ಷತಾ ಅಧಿಕಾರಿಗಳು ಅವರನ್ನು ದಿಲ್ಲಿ ಮೆಟ್ರೋ ರೈಲ್ ಪೊಲೀಸರಿಗೆ ಹಸ್ತಾಂತರಿಸಿದರು. ಆರು ಮಂದಿ ಆರೋಪಿಗಳನ್ನು ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ನಿಲುಗಡೆಯಾಗಬೇಕು ಎನ್ನುವಷ್ಟರಲ್ಲಿ ಈ ಮಂದಿ ಘೋಷಣೆ ಕೂಗಲಾರಂಭಿಸಿದ್ದರು.

error: Content is protected !!

Join the Group

Join WhatsApp Group