ತಿರುವನಂತಪುರಂ, ಜ.24: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದ ಮಲಪ್ಪುರಂನ ಕೆಲ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಸರಬರಾಜನ್ನು ತಡೆ ಹಿಡಿದಿದೆ ಎಂದು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಸಿಸೆಕ್ಷನ್ 153 (ಎ) ಅಡಿಯಲ್ಲಿ ಸಂಸದೆ ಶೋಭಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ಕೆ.ಆರ್. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ವಿವಾದಾತ್ಮಕ ಕಾಯ್ದೆಗೆ ಬೆಂಬಲ ನೀಡಿದ್ದಕ್ಕಾಗಿ ಕುಟ್ಟಿಪುರಂ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಹಿಂದೂ ಕುಟುಂಬಗಳಿಗೆ ನೀರಿನ ಸರಬರಾಜು ತಡೆಯಲಾಗಿದೆ ಎಂದು ಸುದ್ದಿಯೊಂದು ವ್ಯಾಪಕವಾಗಿ ಹರಡಿತ್ತು. ಇದರ ಕುರಿತು ಸಂಸದೆ ಶೋಭಾ ಜನವರಿ 22 ರಂದು ಟ್ವೀಟ್ ಮಾಡಿ “ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ” ಏಂದು ಅಭಿಪ್ರಾಯಪಟ್ಟಿದ್ದರು.
ಪ್ರಕರಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೊದಲ ಆರೋಪಿ ಎಂದು ದಾಖಲಾಗಿದೆ.ಐಪಿಸಿಯ ಸೆಕ್ಷನ್ 153 (ಎ) ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಮತ್ತು ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದನ್ನು ಸೂಚಿಸುತ್ತದೆ. ನಕಲಿ ಸುದ್ದಿಯನ್ನು ಆಧರಿಸಿ ಕುಟ್ಟಿಪುರಂ ಬಗ್ಗೆ ಸಂಸದರು ಮಾಡಿದ ಟ್ವೀಟ್ ಧಾರ್ಮಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚಂದ್ರನ್ ದೂರಿನಲ್ಲಿ ಹೇಳಿದ್ದಾರೆ.